Team India News- ಭಾರತ ತಂಡದೊಂದಿಗೆ ಆಟಗಾರರ ಪತ್ನಿಯರು ಸಹ ವಾಸ್ತವ್ಯ ಹೂಡುವ, ಪ್ರಯಾಣ ಮಾಡುವ ಬಗ್ಗೆ ಕಳೆದ ವರ್ಷ ದೊಡ್ಡ ಚರ್ಚೆ ನಡೆದ ಬಳಿಕ ಬಿಸಿಸಿಐ ಸ್ಪಷ್ಟ ನಿಲುವಿಗೆ ಬಂದಿತ್ತು. ಅದರ ಪ್ರಕಾರ ಅನೇಕ ನಿರ್ಬಂಧ ಮತ್ತು ನಿಬಂಧನೆಗಳನ್ನು ವಿಧಿಸಾಗಿತ್ತು. ದೀರ್ಘಕಾಲದ ಪ್ರವಾಸದಲ್ಲಿ ಮಾತ್ರ ಕೆಲ ದಿನಗಳ ಕಾಲ ಕುಟುಂಬದೊಂದಿಗೆ ಉಳಿಯಲು ಅವಕಾಶ ನೀಡಲಾಗಿತ್ತು. ಇದೀಗ ಈ ವಿಚಾರವಾಗಿ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮುಂದಿರಿಸಿದ ಪ್ರಸ್ತಾಪಕ್ಕೆ ಬಿಸಿಸಿಐ ಖಡಕ್ಕಾಗಿ ಹೇಳಿದ್ದೇನು?

ಹೈಲೈಟ್ಸ್:
- ಟಿ20 ವಿಶ್ವಕಪ್ ವೇಳೆ ಪತ್ನಿಯರು ಜೊತೆಗಿರಬಹುದೇ ಎಂದು ಆಟಗಾರರಿಂದ ಮನವಿ
- ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ತಿಳಿಸಿರುವ ಬಿಸಿಸಿಐ
- ಈ ಹಿಂದೆ ಬಾರ್ಡರ್ ಗವಾಸ್ಕಟ್ ಟ್ರೋಫಿ ಬಳಿಕ ಜಾರಿಯಾಗಿದ್ದ ಕಟ್ಟುನಿಟ್ಟಿನ ನಿಯಮಟೀ ಇಂಡಿಯಾ ಆಟಗಾರರ ಜೊತೆ ಅವರ ಕುಟುಂಬ ಪ್ರಯಾಣಿಸಬಹುದೇ ಎಂಬ ವಿಚಾರ ಬಹಳ ಹಿಂದೆ ಅನೇಕ ಬಾರಿ ಚರ್ಚೆಯಾಗಿ ಕಟ್ಟುನಿಟ್ಟಾದ ನಿಯಮಗಳನ್ನು ಬಿಸಿಸಿಐ ಅಳವಡಿಸಿತ್ತು. ಆದರೂ ಭಾಗಶಃ ಅನುಮತಿ ನೀಡುವ ತೀರ್ಮಾನಕ್ಕೆ ಬಂದಿತ್ತು. ಇದೀಗ ಟಿ20 ವಿಶ್ವಕಪ್ ನಡೆಯುತ್ತಿರುವ ವೇಳೆ ಆಟಗಾರರೊಂದಿಗೆ ಅವರ ಕುಟುಂಬ ಇರುವುದನ್ನು ನಿಷೇಧಿಸಿದೆ.
ತಂಡದ ಮ್ಯಾನೇಜ್ ಮೆಂಟ್ ಈ ವಿಚಾರವಾಗಿ ಬಿಸಿಸಿಐ ಮೇಲಧಿಕಾರಿಗಳನ್ನು ಸಂಪರ್ಕಿಸಿತ್ತು. ಆಟಗಾರರ ಪತ್ನಿಯರು ಮತ್ತು ಭಾವೀ ಪತ್ನಿಯರು ತಂಡದೊಂದಿಗೆ ಇರಬಹುದೇ ಎಂದು ಪ್ರಶ್ನಿಸಿತ್ತು. ಆದರೆ ಬಿಸಿಸಿಐ ಈ ಪ್ರಸ್ತಾವನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ. ಹಾಗೂ ಒಂದು ವೇಳೆ ಅವರು ಬಯಸಿದರೆ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಬಹುದು ಎಂದು ಖಡಕ್ ಆಗಿ ತಿಳಿಸಿದೆ ಎಂದು ಬಿಸಿಸಿಐ ಮೂಲವೊಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ. ಕಳೆದ ವರ್ಷ ಆಟಗಾರರಿಗೆ ಬಿಸಿಸಿಐ 10 ಕಠಿಣ ನಿಯಮಗಳನ್ನು ರೂಪಿಸಿತ್ತು. ಅದರಂತೆ ಪ್ರತಿಯೊಂದು ಟೂರ್ನಿಯಲ್ಲಿ ಅಥವಾ ಪ್ರವಾಸದಲ್ಲಿ ಪತ್ನಿಯರು ಅಥವಾ ಪ್ರೇಯಸಿಯರು ಆಚಗಾರರೊಂದಿಗೆ ಇರವಂತಿಲ್ಲ. ಈ ಬಗ್ಗೆ ಆಟಗಾರರು ಬಿಸಿಸಿಐಗೆ ಮನವಿ ಸಲ್ಲಿಸಿದ ಬಳಿಕ ಪರಿಶೀಲನೆ ನಡೆಸಿ ಕೆಲ ದಿನಗಳ ಕಾಲ ಜೊತೆಗಿರಲು ಅವಕಾಶ ನೀಡಲಾಗುವುದು ಎಂದು ತಿಳಿಸಿತ್ತು. ಪ್ರಸ್ತುತ ಟಿ20 ವಿಶ್ವಕಪ್ ವೇಳೆ ಇದು ಅಸಾಧ್ಯ ಎಂದು ಸ್ಪಷ್ಟವಾಗಿ ತಿಳಿಸಿದೆ.
ಕಳೆದೊಂದು ವರ್ಷದಿಂದ ವಿವಾದ
ಕಳೆದ ವರ್ಷ ಬಾರ್ಡರ್ ಗವಾಸ್ಕರ್ ಟ್ರೋಫಿ ಮುಗಿಯುವವರೆಗೂ ಭಾರತ ತಂಡದ ಆಟಗಾರರೊಂದಿಗೆ ಅವರ ಪತ್ನಿಯರು, ಪ್ರೇಯಸಿಯರು ಪ್ರಯಾಣಿಸುತ್ತಿದ್ದುದು ದೊಡ್ಡ ಸಂಗತಿಯಾಗಿರಲಿಲ್ಲ. ಆದರೆ ಯಾವಾಗ ಟೀಂ ಇಂಡಿಯಾ ಆ ಮಹತ್ವದ ಟೂರ್ನಿಯಲ್ಲಿ 4-1 ಅಂತರದಲ್ಲಿ ಪರಾಭವಗೊಂಡು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರೇಸ್ ನಿಂದ ಹೊರಬಿತ್ತೋ ಆಗ ಈ ವಿಚಾರ ಹೊಗೆಯಾಡಿತು. ಆಟಗಾರರೊಂದಿಗೆ ಅವರ ಕುಟುಂಬ ವರ್ಗವೆಲ್ಲಾ ಪ್ರಯಾಣ ಮಾಡುವುದು, ಅವರೊಂದಿಗೆ ತಂಗುವುದಕ್ಕೆ ವಿರೋಧ ವ್ಯಕ್ತವಾಯಿತು.
ಈ ಬಗ್ಗೆ ತಂಡದ ಕೋಚ್ ಆಗಿದ್ದ ಗೌತಮ್ ಗಂಭೀರ್ ಅವರು ಬಿಸಿಸಿಐ ಮುಂದೆ ಪ್ರಸ್ತಾಪಿಸಿದ್ದರು ಎಂದು ಹೇಳಲಾಗಿದೆ. ಜೊತೆಗೆ ತಂಡದಲ್ಲಿ ಸ್ಟಾರ್ ಸಂಸ್ಕೃತಿಯನ್ನು ತಾನು ಇಲ್ಲವಾಗಿಸುವುದಾಗಿ ಅವರು ಹೇಳಿದ್ದರು. ಇದು ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಉದ್ದೇಶಿಸಿ ಹೇಳಿದ್ದರು ಎಂಬುದು ಅರ್ಥವಾಗದಿದ್ದ ಸಂಗತಿಯಲ್ಲ. ಬಳಿಕ ಬಿಸಿಸಿಐಯು ಆಟಗಾರರಿಗೆ ಕಟ್ಟುನಿಟ್ಟಿನ ನಿಮಯಗಳನ್ನು ರೂಪಿಸಿತ್ತು. ಆಟಗಾರರು ತಂಡದೊಂದಿಗೆ ವಾಸಿಸಬೇಕು, ತಂಡಕ್ಕೆ ನಿಗದಿಯಾಗಿರುವ ವಾಹನದಲ್ಲೇ ಕ್ರೀಡಾಂಗಣಕ್ಕೆ ಪ್ರಯಾಣ ಮಾಡಬೇಕು ಎಂಬಿತ್ಯಾದಿ ವಿಷಯಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿತ್ತು.
ಅದ್ಭುತ ಲಯದಲ್ಲಿರುವ ಟೀಂ ಇಂಡಿಯಾ
ಇದಾದ ಬಳಿಕ ಕಳೆದ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಕೆಲ ದಿನಗಳ ಕಾಲ ಆಟಗಾರರ ಕುಟುಂಬಸ್ಥರಿಗೆ ಜೊತೆಗೆ ಕಳೆಯುವ ಅವಕಾಶ ನೀಡಿತ್ತು. ಇದೀಗ ಮಹತ್ವದ ಟಿ20 ವಿಶ್ವಕಪ್ ವೇಳೆ ಮತ್ತೆ ಈ ಪ್ರಶ್ನೆ ಉದ್ಭವಿಸಿದೆ. ಕಳೆದ ಬಾರಿ ಭಾಗಶಃ ಅನುಮತಿ ನೀಡಿದ್ದ ಮಂಡಳಿ ಈ ಬಾರಿ ಸ್ಪಷ್ಟವಾಗಿ ನಿರಾಕರಿಸಿದೆ. ಹಾಲಿ ಚಾಂಪಿಯನ್ ಭಾರತ ತಂಡ ಭರ್ಜರಿ ಲಯದಲ್ಲಿದ್ದು ಈ ಟಿ20 ವಿಶ್ವಕಪ್ ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡ ಅಮೆರಿಕವನ್ನು ಸೋಲಿಸಿದೆ. ಮುಂದಿನ ಪಂದ್ಯವನ್ನು ಫೆಬ್ರವರಿ 12ರಂದು ನಮೀಬಿಯಾ ವಿರುದ್ಧ ಆಡಲಿದೆ. ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯ 15ರಂದು ಕೊಲಂಬೊದಲ್ಲಿ ನಡೆಯಲಿದೆ.






Be the first to comment
Leave a Reply