
ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ಕಾರ್ಮಿಕ ಮಹಿಳೆ ಬೋರಮ್ಮ ಬಲಿಯಾಗಿದ್ದಾರೆ. ಇದು 7 ದಿನಗಳಲ್ಲಿ ಸಂಭವಿಸಿದ ಎರಡನೇ ಸಾವಾಗಿದೆ. ಆತಂಕಕಾರಿ ಘಟನೆ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯು ಯಶಸ್ವಿಯಾಗಿ ಆ ಆನೆಯನ್ನು ಸೆರೆಹಿಡಿದಿದೆ. ಕೆಲ ದಿನಗಳ ಹಿಂದಷ್ಟೇ ತಾಲ್ಲೂಕಿನ ಹುಣಸೆಹಳ್ಳಿ ಗ್ರಾಮದಲ್ಲಿ ನಾಗೇಶ್ ಗೌಡ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 50 ವರ್ಷದ ಕಾರ್ಮಿಕ ಯಲ್ಲಪ್ಪ ಆನೆ ದಾಳಿಗೆ ಬಲಿಯಾಗಿದ್ದರು. ಈ ಘಟನೆ ನಡೆದು ಒಂದು ವಾರದಲ್ಲೇ ಅದೇ ಕಾಫಿತೋಟದಲ್ಲಿ ಕಾಡಾನೆ ದಾಳಿಗೆ ಇನ್ನೊಂದು ಜೀವ ಬಲಿಯಾಗಿದೆ. ಹೊಸಪೇಟೆ ಮೂಲದ ಬೋರಮ್ಮ (34) ಕಾಡಾನೆ ದಾಳಿಯಲ್ಲಿ ಮೃತಪಟ್ಟ ಕಾರ್ಮಿಕ ಮಹಿಳೆ. ಈ ಘಟನೆಯ ಬಳಿಕ ವೇಗದಿಂದ ಸಾಗಿದ ಆನೆ ಸೆರೆ ಕಾರ್ಯಾಚರಣೆಯು ಇದೀಗ ಯಶಸ್ವಿಯಾಗಿದೆ.
ಕಾಫಿತೋಟಕ್ಕೆ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಬೋರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದೇ ತೋಟದಲ್ಲಿ ಕಳೆದ ಏಳು ದಿನಗಳ ಹಿಂದೆ ಹಾವೇರಿ ಮೂಲದ ಕಾರ್ಮಿಕ ಯಲ್ಲಪ್ಪ ಎಂಬವರು ಕೂಡ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಏಳು ದಿನಗಳ ಅಂತರದಲ್ಲಿ ಎರಡನೇ ಬಲಿ ಸಂಭವಿಸಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಏಳು ಕುಮ್ಕಿ ಆನೆಗಳು ಹಾಗೂ ಸುಮಾರು 75 ಸಿಬ್ಬಂದಿಗಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಹಿಳೆಗೆ ದಾಳಿ ನಡೆಸಿದ ಸ್ಥಳದಿಂದ ಅಲ್ಪ ದೂರದಲ್ಲಿರುವ ಕಾಫಿ ತೋಟದಲ್ಲಿ ಕಾಡಾನೆಯನ್ನು ಪತ್ತೆ ಮಾಡಲಾಯಿತು. ಸೂಕ್ತ ಸಮಯದಲ್ಲಿ ಅರವಳಿಕೆ ಚುಚ್ಚುಮದ್ದು ನೀಡಿ ಆನೆಯನ್ನು ನಿತ್ರಾಣಗೊಳಿಸಿ, ಬಳಿಕ ಕುಮ್ಕಿ ಆನೆಗಳ ಸಹಾಯದಿಂದ ಕಾಡಾನೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ಪಡೆದು ಸೆರೆ ಹಿಡಿಯಲಾಗಿದೆ.






Be the first to comment
Leave a Reply