
ಧಾಡಿಂಗ್ (ನೇಪಾಳ): ನೇಪಾಳದ ಧಾಡಿಂಗ್ನಲ್ಲಿ ಪ್ರಯಾಣಿಕರ ಬಸ್ ತ್ರಿಶೂಲಿ ನದಿಗೆ ಉರುಳಿಬಿದ್ದ ಪರಿಣಾಮ ಕನಿಷ್ಠ 18 ಜನರು ಸಾವನ್ನಪ್ಪಿದ್ದು, 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನಸುಕಿನ ಜಾವ ನಡೆದ ಈ ದುರಂತದ ನಂತರ, ಭದ್ರತಾ ಸಿಬ್ಬಂದಿ ಮತ್ತು ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಬೆಳಗಿನ ಜಾವ 1.30 ರ ಸುಮಾರಿಗೆ ಬಸ್ ಪೃಥ್ವಿ ಹೆದ್ದಾರಿಯಿಂದ ಹೊರಟು ಭೈನ್ಸಿಗೌಡಾದ ಬೆನಿಘಾಟ್ ರೋರಾಂಗ್ ಗ್ರಾಮೀಣ ಪುರಸಭೆ -5 ಬಳಿ ಅಪಘಾತಕ್ಕೀಡಾಗಿ ನದಿಗೆ ಬಿದ್ದಿದೆ. ಅಪಘಾತ ಸ್ಥಳದ ದೃಶ್ಯಗಳು ಆನ್ಲೈನ್ನಲ್ಲಿ ಕಾಣಿಸಿಕೊಂಡಿದ್ದು, ನದಿಗೆ ಬಿದ್ದ ನಂತರ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಬಸ್ ಅಪಘಾತಕ್ಕೆ ನಿಖರವಾದ ಕಾರಣವನ್ನು ಅಧಿಕಾರಿಗಳು ಇಲ್ಲಿಯವರೆಗೆ ನಿರ್ಧರಿಸಿಲ್ಲ. ನೇಪಾಳದ ಮೂರು ಭದ್ರತಾ ಸಂಸ್ಥೆಗಳ ಸಮನ್ವಯದೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ನದಿಯಲ್ಲಿ ಶೋಧ ಕಾರ್ಯ ಮುಂದುವರೆದಿದ್ದು, ಆದಂಘಾಟ್ನಲ್ಲಿರುವ ಎಪಿಎಫ್ ನೇಪಾಳ ವಿಪತ್ತು ನಿರ್ವಹಣಾ ಘಟಕದ ಡೈವರ್ಗಳನ್ನು ಒಳಗೊಂಡ ವಿಶೇಷ ತಂಡ ಈ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಈ ರಕ್ಷಣಾ ಕಾರ್ಯಾಚರಣೆ ನೇತೃತ್ವವನ್ನು ವಿಪತ್ತು ನಿರ್ವಹಣಾ ತರಬೇತಿ ಶಾಲೆಯ ಎಪಿಎಫ್ನ ಉಪ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಗಿರಿ ವಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳವೂ ರಕ್ಷಣಾ ಕಾರ್ಯಾಚರಣೆಗೆ ಸವಾಲಿನ ಭೂಪ್ರದೇಶವಾಗಿದ್ದು, ಮತ್ತು ನದಿಯ ಹರಿವು ಕಾರ್ಯಾಚರಣೆಯನ್ನು ಕಷ್ಟಕರವಾಗಿಸುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.






Be the first to comment
Leave a Reply