
ಬೆಂಗಳೂರು: ಮೆಟ್ರೋ ಪ್ರಯಾಣ ದರ ಏರಿಕೆಗೆ ಇತ್ತೀಚೆಗೆ ತಾತ್ಕಾಲಿಕ ರಿಲೀಫ್ ಸಿಕ್ಕಿತ್ತು. ಆದರೆ ಈಗ ಮತ್ತೆ ದರ ಏರಿಕೆ ಚರ್ಚೆ ಮುನ್ನೆಲೆಗೆ ಬಂದಿದೆ. ದರ ಏರಿಕೆ ಆಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಕಳೆದ ಬಾರಿ ಮೆಟ್ರೋ ಟಿಕೆಟ್ ದರ ಶೇ 5 ರಷ್ಟು ಏರಿಕೆ ಮಾಡಿ ನಂತರ ತಾತ್ಕಾಲಿಕವಾಗಿ ತಡೆ ನೀಡಲಾಗಿತ್ತು. ನಂತರ, ಮೆಟ್ರೋ ಖರ್ಚು ವೆಚ್ಚಗಳ ಬಗ್ಗೆ ಆಡಿಟ್ ಮಾಡಿ ಎಂದು BMRCLಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚಿಸಿದ್ದರು. ಅದರಂತೆ, ಬಿಎಂಆರ್ಸಿಎ ಆಂತರಿಕ ಅಡಿಟ್ ಮಾಡಿದೆ. ಮೆಟ್ರೋ ನಿರ್ವಹಣೆ, ಖರ್ಚು ವೆಚ್ಚ, ಸಿಬ್ಬಂದಿ ಸಂಬಳ, ಇಂಧನ ವೆಚ್ಚ ಎಲ್ಲದರ ಬಗ್ಗೆ ಆಡಿಟ್ ಮುಗಿದಿದ್ದು, ಡಿಸಿಎಂ ಅವರ ಗಮನಕ್ಕೆ ತರಲು ಬಿಎಂಆರ್ಸಿಎ ಮುಂದಾಗಿದೆ. ಆಡಿಟ್ ಮುಗಿದ ಹಿನ್ನೆಲೆ ಮತ್ತೆ ದರ ಏರಿಕೆ ಚರ್ಚೆ ಮುನ್ನೆಲೆಗೆ ಬಂದಿದೆ. ದರ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ನಿಗದಿಯಾಗಿದ್ದ ಶೇ 5 ರ ದರದ ಬದಲು ತುಸು ಕಡಿಮೆ ಏರಿಕೆ ಮಾಡಬಹುದು ಅಥವಾ ಹೆಚ್ಚೇ ಏರಿಕೆ ಆದರೂ ಆಗಬಹುದು ಎನ್ನಲಾಗುತ್ತಿದೆ. ಆದರೆ, ಮೆಟ್ರೋ ಪ್ರಯಾಣಿಕರು ಟಿಕೆಟ್ ದರ ಏರಿಕೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ನಿಗದಿ ಆಗಿದ್ದ ಶೇ 5 ರ ದರದಲ್ಲಿ ಶೇ 1 ಅಥವಾ 2 ರ ದರ ಹೆಚ್ಚಳ ನಿಗದಿ ಮಾಡಬಹುದು ಎಂದು ಅಂದಾಜಿಸಲಾಗಿದೆ. ಅಥವಾ ನಿಗದಿ ಮಾಡಿದ್ದಕ್ಕಿಂತ ಜಾಸ್ತಿ ಆದರೂ ಆಗಬಹುದು ಎಂಬ ಕೂಡ ಚರ್ಚೆ ಇದೆ. ಆದರೆ ದರ ಇಳಿಕೆ ಅಥವಾ ಏರಿಕೆ ಆಗಬೇಕು ಅಂದರೆ ಹೊಸ ದರ ನಿಗದಿ ಸಮಿತಿ ರಚನೆ ಆಗಬೇಕು. ಇದೀಗ ಆಡಿಟ್ ಮುಕ್ತಾಯ ಆದ ಹಿನ್ನೆಲೆ, ಮೆಟ್ರೋ ಬೋರ್ಡ್ ಮೀಟಿಂಗ್ ಸಮಯ ನಿಗದಿ ಮಾಡುವ ವಿಚಾರದ ಬಗ್ಗೆ ಬಿಎಂಆರ್ಸಿಎಲ್ ಎಂಡಿ ಕೇಂದ್ರ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಮನವಿ ಮಾಡಲಿದ್ದಾರೆ. ಬೋರ್ಡ್ ಮೀಟಿಂಗ್ ಬಳಿಕ ಎಷ್ಟು ದರ ಏರಿಕೆ ಅಗುತ್ತದೆ ಎಂಬ ಸ್ಪಷ್ಟತೆ ಸಿಗಲಿದೆ. ಒಟ್ಟಿನಲ್ಲಿ ದರ ಏರಿಕೆ ಆಗುವುದು ನಿಶ್ಚಿತ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆಯಿಂದ ರಿಲೀಫ್ ಸಿಗುತ್ತದೆ ಎಂದುಕೊಂಡಿದ್ದವರಿಗೆ ಇದು ಶಾಕ್. ಟಿಕೆಟ್ ದರ ಏರಿಕೆ ಆದರೆ ಮತ್ತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಸಂಘರ್ಷ ಏರ್ಪಡುವುದಂತೂ ಗ್ಯಾರಂಟಿ.






Be the first to comment
Leave a Reply