
ಭಾರತೀಯ ಸೋಲಾರ್ ಕಂಪನಿಗಳಿಂದ ಮಾಡಿಕೊಳ್ಳಲಾಗುವ ಆಮದುಗಳ ಮೇಲೆ ಅಮೆರಿಕ ಸರ್ಕಾರ ಶೇ. 126ರಷ್ಟು ಸುಂಕ ವಿಧಿಸಿದೆ. ವರ್ಷದ ಹಿಂದೆ ವಿಯೆಟ್ನಾಂ ಇತ್ಯಾದಿ ದೇಶಗಳ ಸೋಲಾರ್ ಉತ್ಪನ್ನಗಳ ಮೇಲೆ ಅಮೆರಿಕ ಆಮದು ಸುಂಕ ಹಾಕಿತ್ತು. ಆಗ ಭಾರತೀಯ ಕಂಪನಿಗಳನ್ನು ಹೊರತಪಡಿಸಲಾಗಿತ್ತು. ಈಗ ಭಾರತೀಯ ಸೋಲಾರ್ ಕಂಪನಿಗಳಿಗೂ ಅಮೆರಿಕದ ಆಮದು ಸುಂಕದ ತಡೆ ಎದುರಾಗಿದೆ.
ಸೋಲಾರ್ ಉತ್ಪನ್ನಗಳ ಆಮದು ಮೇಲೆ ಅಮೆರಿಕ ವಿಧಿಸಿರುವ ಸುಂಕಕ್ಕೂ ಅದರ ಪ್ರತಿಸುಂಕ ಕ್ರಮಕ್ಕೂ ಸಂಬಂಧ ಇಲ್ಲ. ಸೋಲಾರ್ ಉತ್ಪನ್ನಗಳು ತಯಾರಾದ ದೇಶದಲ್ಲಿ ಅದಕ್ಕೆ ಸಿಕ್ಕಿರುವ ಸಬ್ಸಿಡಿಗಳೆಷ್ಟು ಎನ್ನುವುದರ ಆಧಾರದ ಮೇಲೆ ಸುಂಕ ವಿಧಿಸಲಾಗಿರುವುದು ತಿಳಿದುಬಂದಿದೆ. ಅಂದರೆ, ಸೋಲಾರ್ ಉತ್ಪನ್ನ ತಯಾರಿಸುವ ಕಂಪನಿಗಳಿಗೆ ಆ ದೇಶದ ಸರ್ಕಾರ ಸಬ್ಸಿಡಿ ನೆರವು ಒದಗಿಸಿದಾಗ, ಉತ್ಪನ್ನದ ಬೆಲೆ ಕಡಿಮೆ ಆಗಿರುತ್ತದೆ. ಇದರಿಂದ ಕಡಿಮೆ ಬೆಲೆಗೆ ರಫ್ತು ಮಾಡಲು ಸಾಧ್ಯವಾಗುತ್ತದೆ. ಅಮೆರಿಕದ ಸೋಲಾರ್ ಉತ್ಪಾದಕರಿಗಿಂತ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಈ ಅಂಶ ಪರಿಗಣಿಸಿ ಅಮೆರಿಕದ ವಾಣಿಜ್ಯ ಸಚಿವಾಲಯವು ಸೋಲಾರ್ ಉತ್ಪನ್ನಗಳ ಆಮದು ಮೇಲೆ ಅಧಿಕ ಸುಂಕವನ್ನು ಹೇರಲು ನಿರ್ಧರಿಸಿದೆ ಎನ್ನಲಾಗಿದೆ.
ಭಾರತದ ಯಾವ್ಯಾವ ಕಂಪನಿಗಳ ಮೇಲೆ ಪರಿಣಾಮ?
ಭಾರತದಲ್ಲಿ ಸೋಲಾರ್ ಉಪಕರಣಗಳನ್ನು ತಯಾರಿಸುವ ಹಲವಾರು ಕಂಪನಿಗಳಿವೆ. ಅವುಗಳ ಪೈಕಿ ಕೆಲ ಕಂಪನಿಗಳು ಅಮೆರಿಕನ್ ಮಾರುಕಟ್ಟೆಗೆ ಹೆಚ್ಚು ರಫ್ತು ಮಾಡುತ್ತವೆ. ಅಂಥ ಕಂಪನಿಗಳಲ್ಲಿ ವಾರೀ ಎನರ್ಜೀಸ್, ವಿಕ್ರಮ್ ಸೋಲಾರ್ ಲಿಮಿಟೆಡ್, ಪ್ರೀಮಿಯರ್ ಎನರ್ಜೀಸ್ ಲಿಮಿಟೆಡ್ ಇತ್ಯಾದಿ ಇವೆ. ಅಮೆರಿಕದಿಂದ ಸಿಕ್ಕಾಪಟ್ಟೆ ಸುಂಕ ಹೇರಿಕೆ ಕ್ರಮ ಬಂದ ಬೆನ್ನಲ್ಲೇ ಈ ಸೋಲಾರ್ ಕಂಪನಿಗಳ ಷೇರುಗಳು ಬುಧವಾರ ನೆಲಕಚ್ಚಿವೆ. ವಾರೀ ಎನರ್ಜೀಸ್ ಷೇರುಬೆಲೆ ಬೆಳಗಿನ ವಹಿವಾಟಿನಲ್ಲಿ ಶೇ. 10ರಷ್ಟು ಕುಸಿದಿತ್ತು. ಪ್ರೀಮಿಯರ್ ಎನರ್ಜೀಸ್ ಕೂಡ ಶೇ. 10 ಕೆಳಗಿನ ಮಿತಿ ಮುಟ್ಟಿತ್ತು. ವಿಕ್ರಮ್ ಸೋಲಾರ್ನ ಷೇರುಬೆಲೆ ಶೇ. 5ಕ್ಕಿಂತಲೂ ಹೆಚ್ಚಿನ ಕುಸಿತ ಕಂಡಿದೆ. ಅಮೆರಿಕದ ವಾಣಿಜ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಭಾರತದಿಂದ ಸೋಲಾರ್ ಉತ್ಪನ್ನಗಳನ್ನು 2024ರಲ್ಲಿ ಆಮದು ಮಾಡಿಕೊಂಡಿರುವುದು 792.6 ಮಿಲಿಯನ್ ಡಾಲರ್ ಮೌಲ್ಯದಷ್ಟು. 2022ಕ್ಕೆ ಹೋಲಿಸಿದರೆ 2024ರಲ್ಲಿ ಒಂಬತ್ತು ಪಟ್ಟು ಹೆಚ್ಚು ಆಮದು ನಡೆದಿದೆ.






Be the first to comment
Leave a Reply