ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿ ಇನ್ಮುಂದೆ ‘ಕಲರ್ ಕೋಡ್’ ಜಾರಿ -ಹೈಕೋರ್ಟ್​ನಿಂದ ಮಹತ್ವದ ಸೂಚನೆ

ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿ ಇನ್ಮುಂದೆ ‘ಕಲರ್ ಕೋಡ್’ ಜಾರಿ -ಹೈಕೋರ್ಟ್​ನಿಂದ ಮಹತ್ವದ ಸೂಚನೆ

ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಹಾಗೂ ಜನದಟ್ಟಣೆಯ ವ್ಯಾಪಾರ ಕೇಂದ್ರವಾದ ಬಸವನಗುಡಿಯ ‘ಗಾಂಧಿ ಬಜಾರ್’ನಲ್ಲಿ (Gandhi Bazaar) ಇನ್ಮುಂದೆ ಹೊಸ ನಿಯಮ ಜಾರಿಗೆ ಬರಲಿದೆ. ಖಾಯಂ ಅಂಗಡಿ ಮಾಲೀಕರು ಹಾಗೂ ಬೀದಿಬದಿ ವ್ಯಾಪಾರಿಗಳ ನಡುವಿನ ಕಿತ್ತಾಟಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಹೈಕೋರ್ಟ್, ಗಾಂಧಿ ಬಜಾರ್‌ನಲ್ಲಿ ‘ಕಲರ್ ಕೋಡ್’ (Color Code) ಜಾರಿಗೊಳಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಮಹತ್ವದ ಸೂಚನೆ ನೀಡಿದೆ. ಗಾಂಧಿ ಬಜಾರ್‌ನಲ್ಲಿ ಸೃಷ್ಟಿಯಾಗಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನ್ಯಾಯಾಲಯವು ಈ ವಿನೂತನ ಐಡಿಯಾವನ್ನು ಮುಂದಿಟ್ಟಿದೆ.

ಕಿತ್ತಾಟಕ್ಕೆ ಕಾರಣವೇನು?

ಗಾಂಧಿ ಬಜಾರ್‌ನಲ್ಲಿ ಖಾಯಂ ಆಗಿ ವಾಣಿಜ್ಯ ಮಳಿಗೆಗಳನ್ನು (Commercial Shops) ಇಟ್ಟುಕೊಂಡಿರುವ ಮಾಲೀಕರು ಹಾಗೂ ಬೀದಿಬದಿ ವ್ಯಾಪಾರಿಗಳ ನಡುವೆ ಪ್ರತಿದಿನ ಜಟಾಪಟಿ ನಡೆಯುತ್ತಲೇ ಇತ್ತು. ಖಾಯಂ ಅಂಗಡಿಗಳ ಮುಂದೆಯೇ ಬೀದಿಬದಿ ವ್ಯಾಪಾರಿಗಳು ತಮ್ಮ ವ್ಯಾಪಾರ ಶುರು ಮಾಡುತ್ತಿರುವುದರಿಂದ, ನಮ್ಮ ವ್ಯವಹಾರಕ್ಕೆ ತೊಂದರೆಯಾಗುತ್ತಿದೆ ಎಂದು ಖಾಯಂ ಅಂಗಡಿ ಮಾಲೀಕರು ಅಳಲು ತೋಡಿಕೊಂಡಿದ್ದರು. ಇದೇ ವಿಚಾರವಾಗಿ ತಮಗೆ ನ್ಯಾಯ ಒದಗಿಸುವಂತೆ ಕೋರಿ ಗುಂಡೂರಾವ್ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಗುಂಡೂರಾವ್ ಅವರ ಪರ ವಾದ ಆಲಿಸಿದ ನ್ಯಾಯಾಲಯವು, ಯಾರೊಬ್ಬರಿಗೂ ಅನ್ಯಾಯವಾಗಬಾರದು, ಎಲ್ಲರಿಗೂ ನ್ಯಾಯ ಸಿಗಬೇಕು ಎಂಬ ಸದುದ್ದೇಶದಿಂದ ಈ ‘ಕಲರ್ ಕೋಡ್’ ವ್ಯವಸ್ಥೆಯನ್ನು ಜಾರಿಗೊಳಿಸಲು ಸೂಚಿಸಿದೆ.

ಏನಿದು ‘ಕಲರ್ ಕೋಡ್’ ವ್ಯವಸ್ಥೆ?

ನ್ಯಾಯಾಲಯದ ಸೂಚನೆಯಂತೆ ಜಿಬಿಎ ಗಾಂಧಿ ಬಜಾರ್‌ನಲ್ಲಿ ಈ ಕೆಳಗಿನಂತೆ ವ್ಯವಸ್ಥೆ ಮಾಡಲಿದೆ. ಗಾಂಧಿ ಬಜಾರ್‌ನಲ್ಲಿ ಪಾದಚಾರಿಗಳಿಗೆ, ಖಾಯಂ ವಾಣಿಜ್ಯ ಅಂಗಡಿಗಳಿಗೆ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಜಾಗವನ್ನು ಮೀಸಲಿಡುವುದು. ಖಾಯಂ ಅಂಗಡಿಗಳಿಗೆ ಒಂದು ನಿರ್ದಿಷ್ಟ ಬಣ್ಣದ ಮಾರ್ಕಿಂಗ್, ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಬಣ್ಣದ ಮಾರ್ಕಿಂಗ್ ನೀಡುವುದು. ಅದೇ ರೀತಿ ಪಾದಚಾರಿಗಳು ನಡೆದಾಡಲು ಅನುಕೂಲವಾಗುವಂತೆ ಅವರಿಗೂ ಪ್ರತ್ಯೇಕ ಬಣ್ಣದ ಮಾರ್ಕ್ ಮಾಡುವುದು. ಯಾವ ವ್ಯಾಪಾರಿಗಳಿಗೆ ಯಾವ ಬಣ್ಣದ ಜಾಗವನ್ನು ಮಾರ್ಕ್ ಮಾಡಲಾಗಿದೆಯೋ, ಅವರು ಆ ನಿರ್ದಿಷ್ಟ ಜಾಗದ ಮಿತಿಯಲ್ಲೇ ವ್ಯಾಪಾರ ಮಾಡಬೇಕು. ಪಾದಚಾರಿಗಳು ತಮಗೆ ನಿಗದಿಪಡಿಸಿದ ಬಣ್ಣದ ಜಾಗದಲ್ಲೇ (ಫುಟ್‌ಪಾತ್) ನಡೆದಾಡಬೇಕು. ಇದನ್ನು ಉಲ್ಲಂಘಿಸುವಂತಿಲ್ಲ.

ಏಪ್ರಿಲ್ 1ರ ಡೆಡ್‌ಲೈನ್!

ಈ ‘ಕಲರ್ ಕೋಡ್’ ವ್ಯವಸ್ಥೆಯನ್ನು ಆದಷ್ಟು ಶೀಘ್ರವಾಗಿ ಜಾರಿಗೆ ತಂದು, ಎಲ್ಲರಿಗೂ ನಿರ್ದಿಷ್ಟ ಜಾಗದಲ್ಲಿ ವ್ಯಾಪಾರ ಮಾಡಲು ಅನುವು ಮಾಡಿಕೊಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಲ್ಲದೆ, ಕಲರ್ ಕೋಡ್ ಜಾರಿಗೊಳಿಸುವ ವಿಚಾರದಲ್ಲಿ ಈವರೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಮುಂಬರುವ ಏಪ್ರಿಲ್ 1ರೊಳಗೆ ನ್ಯಾಯಾಲಯಕ್ಕೆ ಸಂಪೂರ್ಣ ಮಾಹಿತಿ ನೀಡುವಂತೆಯೂ ಡೆಡ್‌ಲೈನ್ ವಿಧಿಸಿದೆ. ಒಟ್ಟಿನಲ್ಲಿ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾದರೆ ಗಾಂಧಿ ಬಜಾರ್‌ನ ಟ್ರಾಫಿಕ್ ದಟ್ಟಣೆ ಹಾಗೂ ವ್ಯಾಪಾರಿಗಳ ನಡುವಿನ ಕಿತ್ತಾಟಕ್ಕೆ ಬಹುತೇಕ ಮುಕ್ತಿ ಸಿಗುವ ನಿರೀಕ್ಷೆ ಇದೆ.

Be the first to comment

Leave a Reply

Your email address will not be published. Required fields are marked *

ad image