
ಬೆಂಗಳೂರು: ಇಸ್ರೇಲ್-ಇರಾನ್ ಸಂಘರ್ಷದಿಂದ ಬೆಂಗಳೂರಿನಲ್ಲಿ ಡ್ರೈ ಫ್ರೂಟ್ಸ್ ಪೂರೈಕೆ ಸಮಸ್ಯೆ ಉಂಟಾಗುವ ಸಾಧ್ಯತೆಯಿದ್ದು, ಬೆಲೆ ಏರಿಕೆಯಾಗಲಿದೆ. ನಗರಕ್ಕೆ ಬರುವ ಹೆಚ್ಚಿನ ಡ್ರೈ ಫ್ರೂಟ್ಸ್ಗಳು, ವಿಶೇಷವಾಗಿ ಅಂಜೂರ, ಪಿಸ್ತಾ ಮತ್ತು ಖರ್ಜೂರ ಇರಾನ್ನಿಂದ ಆಮದಾಗುವುದೇ ಇದಕ್ಕೆ ಕಾರಣ. ರಂಜಾನ್ ಹಬ್ಬದ ಸಮಯದಲ್ಲಿ ಖರ್ಜೂರಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಸದ್ಯಕ್ಕೆ ದಾಸ್ತಾನು ಇವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮ ಬೆಂಗಳೂರಿನಲ್ಲಿ ಡ್ರೈ ಫ್ರೂಟ್ಸ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಪೂರೈಕೆ ಸಮಸ್ಯೆಯೂ ಎದುರಾಗಬಹುದು ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದ್ದಾರೆ. ನಗರಕ್ಕೆ ಆಮದಾಗುವ ಡ್ರೈ ಫ್ರೂಟ್ಸ್ಗಳಲ್ಲಿ ಹೆಚ್ಚಿನ ಪ್ರಮಾಣದ ವಸ್ತುಗಳು ಇರಾನ್ನಿಂದ ಬರುತ್ತವೆ. ಅಂಜೂರ, ಮಾಮ್ರಾ ಬಾದಾಮಿ, ಪಿಸ್ತಾ, ಪೈನ್ ಬೀಜಗಳ ಜೊತೆಗೆ ಮಜಾಫತಿ ಖರ್ಜೂರಗಳು ವಿಶೇಷವಾಗಿ ಹೆಚ್ಚು ಬೇಡಿಕೆಯಲ್ಲಿವೆ. ರಂಜಾನ್ ಸಮಯದಲ್ಲಿ ಮಜಫತಿ ಖರ್ಜೂರಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎಂದು ಅವರು ಹೇಳಿದ್ದಾರೆ. ಮಜಫತಿ ಖರ್ಜೂರಗಳು ಸಾಮಾನ್ಯವಾಗಿ ಪ್ರತಿ ಕೆಜಿಗೆ ಸುಮಾರು 300 ರೂ.ಗಳಂತೆ ಮಾರಾಟವಾಗುತ್ತವೆ. ರಂಜಾನ್ ವೇಳೆ ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲಾಗುತ್ತದೆ ಎಂದು ರಸೆಲ್ ಮಾರುಕಟ್ಟೆ ಹಣ್ಣು ಮತ್ತು ಡ್ರೈ ಫ್ರೂಟ್ಸ್ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇದ್ರೀಸ್ ಚೌಧರಿ ತಿಳಿಸಿರುವುದಾಗಿ ವರದಿ ಮಾಡಿದೆ.
ಪ್ರಸ್ತುತ ಬೆಂಗಳೂರಿನ ಮಾರುಕಟ್ಟೆಯಲ್ಲಿ ಇರಾನ್ನಿಂದ ಆಮದು ಆಗುವ ಪಿಸ್ತಾ ಕೆಜಿಗೆ 1,800 ರೂ.ನಿಂದ 2,100 ರೂ.ಗಳವರೆಗೆ ಮಾರಾಟವಾಗುತ್ತಿದೆ. ಅಂಜೂರ ಸುಮಾರು 1,600 ರೂ., ಮಾಮ್ರಾ ಬಾದಾಮಿ 2,500 ರೂ., ಪೈನ್ ಬೀಜಗಳು 8,000 ರೂ.ಗಳ ದರದಲ್ಲಿ ಮಾರಾಟವಾಗುತ್ತಿವೆ. ಇರಾನಿನ ಕೇಸರಿಗೆ ಕೂಡ ಭಾರೀ ಬೇಡಿಕೆ ಇದೆ. ಜಗತ್ತಿನಲ್ಲೇ ಉತ್ತಮ ತಳಿಯ ಕೇಸರಿ ಎಂದು ಪರಿಗಣಿಸಲ್ಪಡುವ ಇರಾನಿನ ಕೇಸರಿ ಪ್ರಸ್ತುತ ಕೆಜಿಗೆ 2.5 ಲಕ್ಷ ರೂ.ನಿಂದ 3 ಲಕ್ಷ ರೂ. ದರ ಹೊಂದಿದೆ. ಮುಂದಿನ ಎರಡು ವಾರಗಳಲ್ಲಿ ಇದು 4 ಲಕ್ಷ ರೂ. ತಲುಪುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ. ಡ್ರೈ ಫ್ರೂಟ್ಸ್ ಮಾತ್ರವಲ್ಲದೆ ಜಾಯಿಕಾಯಿ, ದಾಲ್ಚಿನ್ನಿ, ಸ್ಟಾರ್ ಸೋಂಪು ಸೇರಿದಂತೆ ಕೆಲವು ಮಸಾಲೆಗಳು ಕೂಡ ಇರಾನ್ನಿಂದಲೇ ಆಮದಾಗುತ್ತವೆ. ಇರಾನ್ನಲ್ಲಿ ವ್ಯಾಪಾರ ಮತ್ತು ಬಂದರುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾದರೆ, ಅಫ್ಘಾನಿಸ್ತಾನದಿಂದ ಬರುವ ಸರಕುಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ಇರಾನ್ ಇಸ್ರೇಲ್ ಸಂಘರ್ಷ ಬೆಂಗಳೂರಿನ ಡ್ರೈ ಫ್ರೂಟ್ಸ್ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಸೂಚನೆಗಳು ಕಾಣಿಸುತ್ತಿದ್ದು, ಮುಂದಿನ ವಾರಗಳಲ್ಲಿ ಬೆಲೆ ಏರಿಕೆಯ ಬಿಸಿ ಎದುರಿಸಬೇಕಾಗಬಹುದು.






Be the first to comment
Leave a Reply