“ಇದು ಅಂತ್ಯವಿಲ್ಲದ ಯುದ್ಧವಲ್ಲ”; ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಬಗ್ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಸ್ಪಷ್ಟನೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪಶ್ಚಿಮ ಏಷ್ಯಾದ ಬಿಕ್ಕಟ್ಟಿಗೆ ಸ್ಪಷ್ಟನೆ ನೀಡಿದ್ದು, ಈ ಯುದ್ಧ ಅಂತ್ಯವಿಲ್ಲದುದಾಗುವುದಿಲ್ಲ ಎಂದು ಹೇಳಿದರು. ಇಸ್ರೇಲ್–ಇರಾನ್ ಸಂಬಂಧಗಳು, ಪರಿಸ್ಥಿತಿಯ ಭೀತಿಯ ಮಧ್ಯೆ, ನೇತನ್ಯಾಹು ಈ ಘಟನೆ ಕುರಿತು ಸಾರ್ವಜನಿಕರಿಗೂ ಖಚಿತಪಡಿಸಿದರು.

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಅಮೆರಿಕ ಮತ್ತು ಇಸ್ರೇಲ್‌ ನ ಜಂಟಿ ದಾಳಿಗಳು “ತ್ವರಿತ ಮತ್ತು ನಿರ್ಣಾಯಕವಾಗಿರಲಿವೆ” ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು  ಮಂಗಳವಾರ ಹೇಳಿದ್ದಾರೆ. ಇದು ಅಂತ್ಯವಿಲ್ಲದ ಯುದ್ಧವಲ್ಲ, ಬದಲಿಗೆ ದೀರ್ಘಕಾಲದ ಶಾಂತಿಗೆ ಇದು ಅನಿವಾರ್ಯವಾದ ಹೆಜ್ಜೆ ಎಂದು ಅವರು ಪ್ರತಿಪಾದಿಸಿದ್ದಾರೆ. ಫೆಬ್ರವರಿ 28 ರಂದು ಇರಾನ್‌ ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಈ ಪ್ರದೇಶದಲ್ಲಿ ಸಂಘರ್ಷ ತಾರಕಕ್ಕೇರಿದೆ.

 

ಫಾಕ್ಸ್ ನ್ಯೂಸ್ ವಾಹಿನಿಯೊಂದಿಗೆ ಮಾತನಾಡಿದ ನೆತನ್ಯಾಹು, “ಇದು ಶಾಂತಿಯತ್ತ ತೆರೆಯುವ ದ್ವಾರವಾಗಿದೆ” ಎಂದು ಹೇಳಿದ್ದಾರೆ. ಇರಾನ್‌ನ ಆಡಳಿತ ವ್ಯವಸ್ಥೆಯು ಸುಧಾರಣೆಗೆ ಅರ್ಹವಲ್ಲದ್ದು ಮತ್ತು ಅಮೆರಿಕವನ್ನು ನಾಶಪಡಿಸುವ ಗೀಳು ಹೊಂದಿದೆ ಎಂದು ಅವರು ಕಿಡಿ ಕಾರಿದರು. ಅಮೆರಿಕ ಮತ್ತು ಇಸ್ರೇಲ್ ಸೇರಿ ಸೃಷ್ಟಿಸುತ್ತಿರುವ ಈ ಪರಿಸ್ಥಿತಿಯು ಇರಾನ್‌ನ ಜನರೇ ಅಲ್ಲಿನ ಸರ್ಕಾರವನ್ನು ಉರುಳಿಸಲು ಪೂರಕವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

 

ಇರಾನ್ ತನ್ನ ಪರಮಾಣು ಮತ್ತು ಕ್ಷಿಪಣಿ ಸಾಮರ್ಥ್ಯಗಳನ್ನು ಮರುನಿರ್ಮಾಣ ಮಾಡುತ್ತಿರುವುದರಿಂದ ಈ ದಾಳಿ ಅನಿವಾರ್ಯವಾಗಿತ್ತು ಎಂದು ನೆತನ್ಯಾಹು ವಿವರಿಸಿದರು. ಒಂದು ವೇಳೆ ಈಗ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇರಾನ್‌ನ ಪರಮಾಣು ಶಕ್ತಿಯನ್ನು ತಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಎಚ್ಚರಿಸಿದರು. ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಿಶ್ವದ ಅತ್ಯಂತ ಬಲಿಷ್ಠ ನಾಯಕ ಎಂದು ಕೊಂಡಾಡಿದ ಅವರು, ಇಸ್ರೇಲ್ ಅಮೆರಿಕವನ್ನು ಯುದ್ಧಕ್ಕೆ ಎಳೆದಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದರು.

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಕೂಡ ಈ ದಾಳಿಯನ್ನು ಸಮರ್ಥಿಸಿಕೊಂಡಿದ್ದು, ಇದು ಇರಾಕ್ ಯುದ್ಧದಂತೆ ದೀರ್ಘಕಾಲ ನಡೆಯುವ ಅಥವಾ ರಾಷ್ಟ್ರ ನಿರ್ಮಾಣದ ಪ್ರಯತ್ನವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಈ ಯುದ್ಧದಿಂದಾಗಿ ಇರಾನ್ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಯಾದರೆ ಅದರಿಂದ ಜಗತ್ತಿಗೆ ಒಳ್ಳೆಯದಾಗಲಿದೆ ಎಂದು ಅವರು ಹೇಳಿದ್ದಾರೆ.

ಸದ್ಯದ ವರದಿಗಳ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್ ಇರಾನ್‌ನ 1,250 ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ನಡೆಸಿವೆ. ಇರಾನ್‌ನ 11 ಹಡಗುಗಳನ್ನು ನಾಶಪಡಿಸಲಾಗಿದ್ದು, 10 ಯುದ್ಧನೌಕೆಗಳು ಮುಳುಗಿವೆ. ಇರಾನ್‌ನ ಪ್ರತಿದಾಳಿಯಲ್ಲಿ ಆರು ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದಾರೆ. ಈ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ತೈಲ ವ್ಯಾಪಾರಕ್ಕೆ ಅಡ್ಡಿಯಾಗಿದ್ದು, ಜಾಗತಿಕವಾಗಿ ತೈಲ ಬೆಲೆ ಏರಿಕೆಯ ಭೀತಿ ಎದುರಾಗಿದೆ.

Be the first to comment

Leave a Reply

Your email address will not be published. Required fields are marked *

ad image