ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಗೆ ಎಚ್‌ಡಿಕೆ ಸೂಚನೆ

ಬೆಂಗಳೂರು,ಮಾ.3- ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಯನ್ನು ಹೆಚ್ಚಿಸಲು ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಜೆಡಿಎಸ್‌‍ ಪ್ರಮು ಖರಿಗೆ ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ. ಜಿಬಿಎ ವ್ಯಾಪ್ತಿಯ 5 ನಗರಪಾಲಿಕೆಗಳಲ್ಲಿ ಬರುವ 369 ವಾರ್ಡ್‌ಗಳಲ್ಲಿ ಪಕ್ಷ ಸಂಘಟನೆ ಮಾಡುವ ಬಗ್ಗೆ ಕುಮಾರಸ್ವಾಮಿ ಅವರು ಕೆಲವು ನಿರ್ಧಿಷ್ಟ ಸಲಹೆಸೂಚನೆಗಳನ್ನು ನೀಡಿದ್ದಾರೆ.

ಪಕ್ಷದ ಕೇಂದ್ರ ಕಚೇರಿ ಜೆಪಿಭವನದಲ್ಲಿ ನಿನ್ನೆ ಗ್ರೇಟರ್‌ ಬೆಂಗಳೂರು ಜೆಡಿಎಸ್‌‍ ಅಧ್ಯಕ್ಷ ಎಚ್‌.ಎಂ.ರಮೇಶ್‌ ಗೌಡ ಸೇರಿದಂತೆ 5 ವಿಭಾಗಗಳ ನೂತನ ಅಧ್ಯಕ್ಷರು ಹಾಗೂ ವಿಧಾನಸಭಾ ಕ್ಷೇತ್ರಗಳ ಹೊಸ ಅಧ್ಯಕ್ಷರೊಂದಿಗೆ ಸುದೀರ್ಘ ಸಭೆ ನಡೆಸಿ ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ.

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಪಕ್ಷದ ಘಟಕವನ್ನು ಪುನಾರಚಿಸಿದ್ದು, ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಉತ್ಸಾಹದಿಂದ ಪಕ್ಷದ ಸಂಘಟನೆಗೆ ಹಾಗೂ ಮುಂಬರುವ ಚುನಾವಣೆಗೆ ಸಜ್ಜಾಗಬೇಕು ಎಂದು ಅವರು ಸೂಚಿಸಿದ್ದಾರೆ.

ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ವಾರ್ಡ್‌ವಾರು , ಮತಗಟ್ಟೆವಾರು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಲಹೆ ನೀಡಿದ್ದು, ಎಲ್ಲಾ ವಿಭಾಗಗಳಲ್ಲೂ ಪಕ್ಷದ ಚಟುವಟಿಕೆಗಳು ನಿರಂತರವಾಗಿರಬೇಕು. ಮುಖಂಡರು ಸಕ್ರಿಯವಾಗಿ ಕೆಲಸ ಮಾಡಬೇಕು. ಪಕ್ಷದ ಕೇಂದ್ರ ಕಚೇರಿ ಕಾಲಕಾಲಕ್ಕೆ ನೀಡುವ ಸಲಹೆ ಸೂಚನೆಗಳನ್ನು ಪಾಲಿಸಿ ಕ್ರಿಯಾಶೀಲವಾಗಿ ಜವಾಬ್ದಾರಿ ನಿರ್ವಹಿಸಬೇಕು ಎಂದು ಅವರು ಹೇಳಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಬೇಕು. ರಾಜ್ಯ ಸರ್ಕಾರದ ಆಡಳಿತದಿಂದ ಜನರು ರೋಸಿಹೋಗಿದ್ದಾರೆ.ಜನರಿಗೆ ಆಗುತ್ತಿರುವ ಅನಾನೂಕೂಲಗಳ ಮನವರಿಕೆ ಮಾಡಿಕೊಟ್ಟು ಆಡಳಿತ ವಿರೋಧಿ ಅಲೆಯ ಲಾಭವನ್ನು ಪಕ್ಷದ ಪರವಾಗಿ ಪಡೆದುಕೊಳ್ಳಲು ಶ್ರಮಿಸಬೇಕು.

ಜನರು ಕೂಡ ಬಿಜೆಪಿ-ಜೆಡಿಎಸ್‌‍ ಮೈತ್ರಿಯನ್ನು ಇಷ್ಟಪಟ್ಟಿದ್ದಾರೆ. ಯಾರೂ ಕೂಡ ಮೈತ್ರಿ ವಿಚಾರದಲ್ಲಿ ಬಹಿರಂಗವಾಗಿ ಮಾತನಾಡಬಾರದು. ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ ಸ್ಥಳೀಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಸಲಹೆ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳ ನೂತನ ಅಧ್ಯಕ್ಷರಿಗೆ ನೇಮಕಾತಿ ಆದೇಶ ಪತ್ರಗಳನ್ನು ಕುಮಾರಸ್ವಾಮಿ ನೀಡಿದ್ದಾರೆ. ಸಭೆಯಲ್ಲಿ ಜೆಡಿಎಸ್‌‍ ಕೋರ್‌ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ವಿಧಾನಪರಿಷತ್‌ ಸದಸ್ಯರಾದ ಟಿ.ಎ.ಶರವಣ, ಜವರಾಯಿ ಗೌಡ, ವಿಧಾನಪರಿಷತ್‌ ಮಾಜಿ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಇ.ಕೃಷ್ಣಪ್ಪ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶಿ ರಾಮೇಗೌಡ, ಮುಖಂಡರಾದ ಆರ್‌.ಪ್ರಕಾಶ್‌, ಗೊಟ್ಟಿಗೆರೆ ಮಂಜುನಾಥ್‌, ತಿಮೇಗೌಡ ಮೊದಲಾದವರು ಭಾಗವಹಿಸಿದ್ದರು.

Be the first to comment

Leave a Reply

Your email address will not be published. Required fields are marked *

ad image