ಗಿಲ್ಲಿ ನಾಯಕನಾಗಿ ನಟಿಸಿರೋ `ಸೂಪರ್ ಹಿಟ್’ ಚಿತ್ರ ಫೆ.27 ರಂದು ತೆರೆಗೆ

ಬಿಗ್ ಬಾಸ್ (Bigg Boss) ವಿನ್ನರ್ ಗಿಲ್ಲಿ ನಟ (Gilli Nata) ನಾಯಕನಾಗಿ ನಟಿಸಿರುವ, ವಿಜಯಾನಂದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ `ಸೂಪರ್ ಹಿಟ್’ (Superhit Movie). ತನ್ನ ಆಂತರ್ಯದ ಕಸುವಿನ ಸುಳಿವಿನಿಂದಲೇ ಪ್ರೇಕ್ಷಕರ ನಡುವೆ ಚರ್ಚೆ ಹುಟ್ಟು ಹಾಕಿದ್ದ ಈ ಸಿನಿಮಾಕ್ಕೀಗ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ ಜನಪ್ರಿಯತೆಯೂ ಕೂಡಾ ಮತ್ತಷ್ಟು ಶಕ್ತಿ ತುಂಬಿದೆ.

ಪತ್ರಿಕಾಗೋಷ್ಠಿಯಲ್ಲಿ ಟೀಸರ್ ಒಂದರ ಮೂಲಕ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ವೇದಿಕೆಯಲ್ಲಿ ನಿರ್ದೇಶಕ ವಿಜಯಾನಂದ್, ನಿರ್ಮಾಪಕ ಜಿ ಉಮೇಶ್, ಸಾಧು ಕೋಕಿಲಾ, ಗೀತರಚನೆಕಾರ ಡಾ.ವಿ ನಾಗೇಂದ್ರ ಪ್ರಸಾದ್, ಗೌರವ್ ಶೆಟ್ಟಿ, ಶ್ವೇತಾ ಮುಂತಾದವರು ಸಿನಿಮಾ ಬಗ್ಗೆ ಭರವಸೆಯ ಮಾತಾಡುತ್ತಲೇ, ಒಂದಷ್ಟು ಮಹತ್ವದ ಅಂಶಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರ ಇದೇ ಫೆ.27ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

ವಿ. ನಾಗೇಂದ್ರ ಪ್ರಸಾದ್ ಅವರ ಸಹೋದರರಾದ ವಿಜಯಾನಂದ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸೂಪರ್ ಹಿಟ್ ಬಿಡುಗಡೆ ದಿನಾಂಕ ಜಾಹೀರು ಮಾಡಿ ಮಾತಾಡಿದ ಅವರು, ಕಥೆ ಸಿದ್ಧವಾದ ಬಗೆಯಿಂದ ಮೊದಲ್ಗೊಂಡು ಈವರೆಗಿನ ಮಧುರ ಸ್ಮೃತಿಯನ್ನು ಮೆಲುಕು ಹಾಕಿದ್ದಾರೆ. ಕಥೆ ಬರೆಯಲು ಶುರು ಮಾಡಿದಾಗಿನಿಂದ ಈ ವರೆಗೂ ಎಲ್ಲವೂ ಹೂವೆತ್ತಿಟ್ಟಷ್ಟೇ ಸಲೀಸಾಗಿ ನಡೆಯುತ್ತಾ ಬಂದಿದೆ ಎಂಬ ಧನ್ಯತಾ ಭಾವ ವ್ಯಕ್ತಪಡಿಸಿರುವ ವಿಜಯಾನಂದ್, ಯಾವುದಕ್ಕೂ ಕೊರತೆಯಾಗದಂತೆ ಒಂದಿಡೀ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಜಿ ಉಮೇಶ್ ಅವರ ಸಿನಿಮಾ ಪ್ರೇಮವನ್ನು ಕೊಂಡಾಡಿದ್ದಾರೆ.

ತನ್ನ ಸಿನಿಮಾ ಮೂಡಿ ಬಂದಿರುವ ರೀತಿ ಮತ್ತು ಅದರ ಕಂಟೆಂಟಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಸದರಿ ಚಿತ್ರ ಸೂಪರ್ ಹಿಟ್ಟಾಗೋದು ಗ್ಯಾರೆಂಟಿ ಎಂಬ ಭರವಸೆ ವ್ಯಕ್ತಪಡಿಸಿದರು. ನೂರು ದಿನಗಳ ಕಾಲ ಯಶಸ್ವೀ ಪ್ರದರ್ಶನ ನೀಡಲು ಅನುವು ಮಾಡಿಕೊಡುವಂತೆ ಪ್ರೇಕ್ಷಕ ಪ್ರಭುಗಳಲ್ಲಿ ವಿನಂತಿಸಿಕೊಂಡರು.

Be the first to comment

Leave a Reply

Your email address will not be published. Required fields are marked *

ad image