ಕ್ಲಾಸ್‌ ರೂಮ್‌ನಲ್ಲೇ ಯುವತಿಗೆ ಗುಂಡು ಹಾರಿಸಿ ಕೊಂದು, ತಾನೂ ಆತ್ಮಹತ್ಯೆಗೆ ಶರಣಾದ ಕಾನೂನು ವಿದ್ಯಾರ್ಥಿ

ಚಂಡೀಗಢ: ಕಾನೂನು ವಿದ್ಯಾರ್ಥಿಯೊಬ್ಬ (Student) ಕ್ಲಾಸ್‌ ರೂಮ್‌ನಲ್ಲೇ ವಿದ್ಯಾರ್ಥಿನಿಯ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ (Punjab) ತರ್ನ್ ತರಣ್ ಜಿಲ್ಲೆಯ ಉಸ್ಮಾ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಕೇವಲ 3 ಸೆಕೆಂಡ್‌ಗಳಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹತ್ಯೆಯಾದ ವಿದ್ಯಾರ್ಥಿನಿಯನ್ನು ಸಂದೀಪ್ ಕೌರ್ ಎಂದು ಗುರುತಿಸಲಾಗಿದೆ. ಹತ್ಯೆ ಮಾಡಿದ ಯುವಕನನ್ನು ಪ್ರಿನ್ಸ್ ರಾಜ್ ಎಂದು ಗುರುತಿಸಲಾಗಿದ್ದು, ಈತ ವಿದ್ಯಾರ್ಥಿನಿಯನ್ನು ಕೊಂದ ನಂತರ ತನ್ನ ಕಡೆಗೆ ಗನ್‌ ತಿರುಗಿಸಿಕೊಂಡು ಟ್ರಿಗರ್ ಒತ್ತಿ ಗುಂಡು ಹಾರಿಸಿಕೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆತ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.
ಕಾಲೇಜು ಆವರಣದಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಾವಳಿಯಲ್ಲಿ ಪ್ರಿನ್ಸ್, ಸಂದೀಪ್ ಕೌರ್ ಮತ್ತು ಮತ್ತೊಬ್ಬ ವಿದ್ಯಾರ್ಥಿನಿ ತರಗತಿಯಲ್ಲಿ ಒಟ್ಟಿಗೆ ಇರುವುದು ಸೆರೆಯಾಗಿದೆ. ತರಗತಿಯಲ್ಲಿ ಇತರ ಕೆಲವು ವಿದ್ಯಾರ್ಥಿಗಳು ಸಹ ಇರುವುದನ್ನು ಕಾಣಬಹುದಾಗಿದ್ದು, ಇದ್ದಕ್ಕಿದ್ದಂತೆ, ಪ್ರಿನ್ಸ್ ತನ್ನ ಚೇರ್‌ನಿಂದ ಎದ್ದು ಸಂದೀಪ್ ಕೌರ್ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ಅವನು ತಲೆಗೆ ಗುಂಡು ಹಾರಿಸಿಕೊಂಡಿರುವುದು ಸೆರೆಯಾಗಿದೆ.

ಸಂದೀಪ್ ಅವರ ತಾಯಿ ಹರ್ಜಿಂದರ್ ಕೌರ್ ಅವರಿಗೆ ಕಾಲೇಜಿನ ಸಿಬ್ಬಂದಿ ಕರೆ ಮಾಡಿ ಕಾಲೇಜಿಗೆ ಬರುವಂತೆ ಸೂಚಿಸಿದ್ದರು. ಆದರೆ ಫೊನ್‌ನಲ್ಲಿ ಮಾಹಿತಿ ನೀಡಿರಲಿಲ್ಲ. ಕಾಲೇಜಿಗೆ ಬಂದ ಬಳಿಕ ವಿಚಾರ ತಿಳಿದ ಅವರು, ಒಬ್ಬ ವಿದ್ಯಾರ್ಥಿ ಆಯುಧದೊಂದಿಗೆ ಕಾಲೇಜಿಗೆ ಹೇಗೆ ಪ್ರವೇಶಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಕೊಲೆಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ಘಟನೆ ನಡೆದಾಗ ತರಗತಿ ಇನ್ನೂ ಪ್ರಾರಂಭವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image