ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬೈರತಿ ಬಸವರಾಜ್ಗೆ ಮತ್ತೆ ಬಂಧನದ ಭೀತಿ ಎದುರಾಗಿದೆ. ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದ್ದು, ಇದೀಗ ಬಿಜೆಪಿ ಶಾಸಕನಿಗೆ ಮತ್ತೆ ಟೆನ್ಷನ್ ಶುರುವಾಗಿದೆ. ಬಂಧನದ ಭೀತಿಯಲ್ಲಿರೋ ಕೆ.ಆರ್. ಪುರಂ ಶಾಸಕ ಬೈರತಿ ಬಸವರಾಜ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗ್ತಿದೆ. ಹೈಕೋರ್ಟ್ನಲ್ಲಿ ಎರಡು ಬಾರಿ ನಿರೀಕ್ಷಣಾ ಜಾಮೀನು ವಜಾಗೊಂಡ ಹಿನ್ನಲೆ ಶಾಸಕ ಬೈರತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.

ಇಂದು ಸುಪ್ರೀಂಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ವಜಾ ಬೆನ್ನಲ್ಲೇ ವಕೀಲರೊಂದಿಗೆ ಶಾಸಕ ಬೈರತಿ ಚರ್ಚೆ ಮಾಡಿದ್ದು, ಲೀಗನ್ ಒಪಿನಿಯನ್ ಪಡೆದು ಹಿರಿಯ ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಿದ್ದತೆ ನಡೆಸಲಾಗಿದೆ. ಬಿಕ್ಲು ಶಿವ ಕೊಲೆ ಕೇಸ್ ಸಂಬಂಧ ಶಾಸಕ ಬೈರತಿ ಬಸವರಾಜ್ನ ಶತಾಯ ಗತಾಯ ವಶಕ್ಕೆ ಪಡೆಯಲು ಸಿಐಡಿ ಟೀಮ್ ಸಜ್ಜಾಗಿದೆ. ಹೀಗಾಗಿ ಶಾಸಕ ಬೈರತಿ ಬಸವರಾಜ್ ಮೇಲೆ ಹದಿನೈದು ದಿನದಿಂದ ಸಿಐಡಿ ತಂಡ ನಿಗಾವಹಿಸಿದೆ.
ಏನಿದು ಪ್ರಕರಣ?
2025 ಜುಲೈ 15ರಂದು ರಾತ್ರಿ ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಲಸೂರು ಲೇಕ್ ಬಳಿ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಬರ್ಬರ ಕೊಲೆ ನಡೆದಿತ್ತು. ಕೊಲೆಯಾದ ಬಿಕ್ಲು ಶಿವ ತಾಯಿ, ಮಾಜಿ ಸಚಿವ ಬೈರತಿ ಬಸವರಾಜ್ ಸೇರಿ ಹಲವರ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಬೈರತಿ ಬಸವರಾಜ್ ಎ5 ಆಗಿದ್ದರು. ಅಲ್ಲದೇ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಬೈರತಿ ಬಸವರಾಜ್ ಬಂಧನ ಭೀತಿಯಿಂದಾಗಿ ತಲೆಮರೆಸಿಕೊಂಡಿದ್ರು. ಅವರು ಪರ ವಕೀಲರು ಜಾಮೀನಿಗಾಗಿ ಮತ್ತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಸಲ್ಲಿಸಿದ್ದರು. ಆದ್ರೆ, ಅದು ವಜಾಗೊಂಡಿತ್ತು. ಬಳಿಕ ಹೈಕೋರ್ಟ್ ಪೀಠ ಬೈರತಿ ಬಸವರಾಜ್ಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಇದೀಗ ಹೈಕೋರ್ಟ್ ನಿರೀಕ್ಷಣಾ ಜಾಮೀನು ವಜಾಗೊಳಿಸಿದೆ. ಬೈರತಿಗೆ ಮತ್ತೆ ಸಂಕಷ್ಟ ಶುರುವಾಗಿದೆ.






Be the first to comment
Leave a Reply