ಮಲೆ ಮಹದೇಶ್ವರ ಬೆಟ್ಟದಲ್ಲಿ ಜನವೋ ಜನ

ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ದಿನೇದಿನೇ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಬೆಟ್ಟದ ಮೇಲೆ ಎಲ್ಲಿ ನೋಡಿದರೂ ಜನವೋ ಜನ. ಸುಡುವ ಬಿಸಿಲನ್ನೂ ಲೆಕ್ಕಿಸದೆ ಪಾದಯಾತ್ರಿಗಳು ಉಘೇಉಘೇ ಮಾದಪ್ಪ ಎಂಬ ಹರ್ಷೋದ್ಘಾರದ ನಡುವೆ ಬೆಟ್ಟದತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯಗಳು ಕಂಡುಬಂದವು.

ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಕೊಳ್ಳೇಗಾಲ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ತೆರಳುತ್ತಿದ್ದು, ಅದರಲ್ಲೂ ಹರಕೆ ಹೊತ್ತವರು ಪಾದಯಾತ್ರೆ ಮೂಲಕ ಸಾಗುತ್ತಿದ್ದಾರೆ.

ಕನಕಪುರ ತಾಲ್ಲೂಕಿನ ಸಂಗಮದಲ್ಲಿ ಹರಿಯುವ ಕಾವೇರಿ ನದಿಯನ್ನು ಹರಸಾಹಸಪಟ್ಟು ದಾಟುತ್ತಿದ್ದಾರೆ. ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ, ಎಸ್‌‍ಡಿಆರ್‌ಎಫ್‌, ಅರಣ್ಯ ಇಲಾಖೆ ಸಿಬ್ಬಂದಿಗಳು ಎರಡೂ ಬದಿಗಳಲ್ಲಿ ಹಗ್ಗಗಳನ್ನು ಕಟ್ಟಿ ಸುರಕ್ಷಿತವಾಗಿ ಭಕ್ತರನ್ನು ನದಿ ದಾಟಿಸುತ್ತಿದ್ದಾರೆ.

ಚಿರತೆ ಆತಂಕದ ನಡುವೆಯೂ ಗುಂಪುಗುಂಪಾಗಿ ಭಕ್ತರು ತೆರಳುತ್ತಿದ್ದು, ಚಾಮರಾಜನಗರ ಜಿಲ್ಲಾಡಳಿತ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಪೊಲೀಸ್‌‍ ಸಿಬ್ಬಂದಿ ಕಟ್ಟೆಚ್ಚರ ಕೈಗೊಂಡಿದ್ದು, ಜಾಗೃತಿ ಮೂಡಿಸುತ್ತಿದ್ದಾರೆ.

ಪಾದಯಾತ್ರಿಗಳಿಗಾಗಿ ದಾನಿಗಳು ರಸ್ತೆಬದಿ ಕುಡಿಯುವ ನೀರು, ತಂಪು ಪಾನೀಯ, ಕಲ್ಲಂಗಡಿ ಹಣ್ಣು ಹಾಗೂ ಊಟ-ತಿಂಡಿ ವ್ಯವಸ್ಥೆಯನ್ನು ಕೆಲ ಗ್ರಾಮಸ್ಥರು ಮಾಡಿದ್ದು, ಪಾದಯಾತ್ರಿಗಳ ದಣಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಸಾಹಸಪಟ್ಟು ಬೆಟ್ಟವೇರಿ ಮಾದಪ್ಪನನ್ನು ಕಣ್ತುಂಬಿಕೊಂಡು ಭಕ್ತರು ಪುನೀತರಾಗುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image