ಬೆಂಗಳೂರು ಪೊಲೀಸ್ ಆಯುಕ್ತರನ್ನೂ ಬಿಡದ ಸೈಬರ್ ವಂಚಕರು!

ಬೆಂಗಳೂರು ಪೊಲೀಸ್ ಆಯುಕ್ತರನ್ನೂ ಬಿಡದ ಸೈಬರ್ ವಂಚಕರು!

ಬೆಂಗಳೂರು: ಸೈಬರ್ ವಂಚಕರು ಜನಸಾಮಾನ್ಯರನ್ನು ವಂಚಿಸುವುದು ಬಿಡಿ, ಇದೀಗ ಬೆಂಗಳೂರು ಪೊಲೀಸ್ ಕಮಿಷನರ್ ಹೆಸರಿನಲ್ಲೇ ನಕಲಿ ಫೇಸ್​​ಬುಕ್ ಖಾತೆ ತೆರೆದು ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರನ್ನೇ ಬಳಸಿಕೊಂಡು ಸೈಬರ್ ವಂಚಕರು ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಜನರನ್ನು ಮೋಸಗೊಳಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಸೀಮಂತ್ ಕುಮಾರ್ ಸಿಂಗ್ ಅವರ ಹೆಸರಿನಲ್ಲಿ ಹಿಂದಿ ಭಾಷೆಯಲ್ಲಿ ನಕಲಿ ಖಾತೆ ರಚಿಸಿ, ಗಣ್ಯರೊಂದಿಗೆ ತೆಗೆದಿರುವ ಫೋಟೋಗಳನ್ನು ಪೋಸ್ಟ್ ಮಾಡಿ ಜನರ ವಿಶ್ವಾಸ ಗಳಿಸಲು ವಂಚಕರು ಪ್ರಯತ್ನಿಸಿದ್ದಾರೆ. ಪೊಲೀಸ್ ಆಯುಕ್ತರೇ ಪೋಸ್ಟ್ ಮಾಡುತ್ತಿದ್ದಾರೆಂದು ನಂಬಿದ ಕೆಲವರು ಆ ಖಾತೆಗೆ ಪ್ರತಿಕ್ರಿಯೆ ನೀಡಿದ್ದು, ಬಳಿಕ ಖಾಸಗಿ ಸಂದೇಶಗಳ ಮೂಲಕ ಹಣ ಕೇಳುವ ಯತ್ನ ನಡೆದಿದೆ ಎನ್ನಲಾಗಿದೆ. ಮೊದಲಿಗೆ ನಂಬಿಕೆ ಮೂಡಿಸಿ ನಂತರ ಹಣ ದೋಚುವ ಉದ್ದೇಶದಿಂದಲೇ ಈ ಖಾತೆ ಸೃಷ್ಟಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ರೀತಿಯ ವಂಚನೆ ಇದೇ ಮೊದಲಲ್ಲ. ಈ ಹಿಂದೆ ಕೂಡ ಅಲೋಕ್ ಕುಮಾರ್ ಹಾಗೂ ಭೀಮಾಶಂಕರ ಅವರ ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ತೆರೆಯಲಾಗಿತ್ತು. ಇದೀಗ ಮತ್ತೊಮ್ಮೆ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಬೆಂಗಳೂರು ನಗರ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಕಲಿ ಖಾತೆಗಳನ್ನು ಸೃಷ್ಟಿಸಿದವರ ಪತ್ತೆಗೆ ತನಿಖೆ ಆರಂಭಿಸಲಾಗಿದೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಗಣ್ಯರ ಹೆಸರಿನ ಖಾತೆಗಳನ್ನು ಕಂಡಕೂಡಲೇ ನಂಬುವ ಮೊದಲು ಪರಿಶೀಲನೆ ನಡೆಸಿ ಪೂರ್ವಾಪರ ತಿಳಿದುಕೊಳ್ಳಬೇಕು. ಸಂಶಯಾಸ್ಪದ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image