
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್‌ಗಳಲ್ಲಿ ಪ್ರಯಾಣಿಸುವವರಿಗೆ ಸಂಸ್ಥೆ ಬಿಸಿ ಮುಟ್ಟಿಸಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಲಗೇಜ್ ದರದಲ್ಲಿ ಏರಿಕೆ ಮಾಡಿ KSRTC ಆದೇಶ ಹೊರಡಿಸಿದೆ. ಬಸ್ ಟಿಕೆಟ್ ದರ ಏರಿಕೆಯಾದಾಗಲೆಲ್ಲಾ ಸಾಮಾನ್ಯವಾಗಿ ಲಗೇಜ್ ದರವನ್ನೂ ಹೆಚ್ಚಿಸಲಾಗುತ್ತದೆ. ಆದರೆ, ಕಳೆದ ವರ್ಷ ಜನವರಿ 2025ರಲ್ಲಿ ಬಸ್ ಪ್ರಯಾಣ ದರ ಏರಿಕೆಯಾಗಿದ್ದರೂ, ಲಗೇಜ್ ದರವನ್ನು ಪರಿಷ್ಕರಿಸಿರಲಿಲ್ಲ. ಇದೀಗ ಬಾಕಿ ಉಳಿದಿದ್ದ ಆ ಏರಿಕೆಯನ್ನು ಜಾರಿಗೊಳಿಸಲಾಗಿದೆ.
ದರ ಏರಿಕೆಗೆ ಕಾರಣವೇನು?
KSRTC ಎಂಡಿ ಅಕ್ರಂ ಪಾಷಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಡೀಸೆಲ್ ದರ, ಸಿಬ್ಬಂದಿ ವೇತನ ಹಾಗೂ ಇತರೆ ನಿರ್ವಹಣಾ ವೆಚ್ಚಗಳು ಹೆಚ್ಚಾಗಿವೆ. ಕಳೆದ ಬಾರಿ ಬಸ್ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಿಸಲಾಗಿತ್ತು. ನಿಯಮದ ಪ್ರಕಾರ ಬಸ್ ದರ ಎಷ್ಟು ಹೆಚ್ಚಾಗುತ್ತದೆಯೋ, ಲಗೇಜ್ ದರವೂ ಅಷ್ಟೇ ಪ್ರಮಾಣದಲ್ಲಿ (15%) ಹೆಚ್ಚಾಗಬೇಕು. ಹೀಗಾಗಿ ಈ ದರ ಪರಿಷ್ಕರಣೆ ಅನಿವಾರ್ಯವಾಗಿದೆ,” ಎಂದು ತಿಳಿಸಿದ್ದಾರೆ. ಕೊನೆಯದಾಗಿ ಡಿಸೆಂಬರ್ 2021ರಲ್ಲಿ ಲಗೇಜ್ ದರವನ್ನು ಹೆಚ್ಚಿಸಲಾಗಿತ್ತು. ಇದೀಗ 4 ವರ್ಷಗಳ ಬಳಿಕ ಮತ್ತೆ ದರ ಏರಿಕೆಯಾಗಿದೆ.
ಲಗೇಜ್ ದರ ಪಟ್ಟಿ ಹೀಗಿದೆ
- ಪ್ರಯಾಣಿಕರ ಸಹಿತ ಮತ್ತು ರಹಿತವಾಗಿ ಸಾಗಿಸುವ ಲಗೇಜ್‌ಗಳ ದರ ಪರಿಷ್ಕರಿಸಲಾಗಿದೆ
- 1 ರಿಂದ 5 ಹಂತದವರೆಗೆ (Stage): ಈ ಹಿಂದೆ ಇದ್ದ 5 ರೂ. ದರವನ್ನು 6 ರೂ.ಗೆ ಏರಿಸಲಾಗಿದೆ
- 6 ರಿಂದ 12 ಹಂತದವರೆಗೆ: ಈ ಹಿಂದೆ ಇದ್ದ 10 ರೂ. ದರವನ್ನು 12 ರೂ.ಗೆ ಏರಿಸಲಾಗಿದೆ
ಪ್ರಯಾಣಿಕರಿಗೆ ರಿಲೀಫ್ ಏನು?
ಲಗೇಜ್ ದರ ಏರಿಕೆಯಾಗಿದ್ದರೂ, ಪ್ರಯಾಣಿಕರಿಗೆ ಒಂದು ಸಮಾಧಾನದ ಸಂಗತಿಯೆಂದರೆ 30 ಕೆ.ಜಿ (30 KG) ತೂಕದವರೆಗಿನ ಲಗೇಜ್‌ಗೆ ಯಾವುದೇ ಶುಲ್ಕವಿರುವುದಿಲ್ಲ. ಅದು ಸಂಪೂರ್ಣ ಉಚಿತವಾಗಿರುತ್ತದೆ. 30 ಕೆ.ಜಿ ಮೀರಿದ ಲಗೇಜ್‌ಗೆ ಮಾತ್ರ ಪರಿಷ್ಕೃತ ದರ ಅನ್ವಯವಾಗಲಿದೆ.






Be the first to comment
Leave a Reply