
ಬೆಂಗಳೂರು: ನನ್ನ ಮಗನಿಗೆ ಬೈಕ್ ಓಡಿಸಲು ಬರುತ್ತೆ ಎಂದು ಹೆಮ್ಮೆಯಿಂದ ಬೀಗುವ ಪೋಷಕರೇ, ಸ್ವಲ್ಪ ನಿಲ್ಲಿ. ಇತ್ತೀಚೆಗೆ ಹೊಸಕೋಟೆಯಲ್ಲಿ ನಡೆದ ಭೀಕರ ಅಪಘಾತವನ್ನೊಮ್ಮೆ ನೆನಪಿಸಿಕೊಳ್ಳಿ. ಬೆಂಗಳೂರಿನಲ್ಲಿ ಅಪ್ರಾಪ್ತ ವಯಸ್ಕರ ವಾಹನ ಚಾಲನೆ ಮತ್ತು ಪುಂಡಾಟಿಕೆ ಮಿತಿಮೀರಿದೆ. ಸಂಚಾರಿ ಪೊಲೀಸರು ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಪೋಷಕರ ನಿದ್ದೆಗೆಡಿಸುವಂತಿವೆ. ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಅಪ್ರಾಪ್ತರು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದ ಪ್ರಕರಣಗಳು ಮತ್ತು ಅಪಘಾತಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. 2023 ರಿಂದ 2025ರ ಡಿಸೆಂಬರ್ ವರೆಗೆ ಒಟ್ಟು 706 ಕೇಸ್ಗಳು ದಾಖಲಾಗಿವೆ ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬಹುದು.
ಸೋಶಿಯಲ್ ಮೀಡಿಯಾದಲ್ಲಿ ‘ಲೈಕ್ಸ್’ ಗಿಟ್ಟಿಸಿಕೊಳ್ಳಲು ಪ್ರಾಣವನ್ನೇ ಪಣಕ್ಕಿಟ್ಟು ವೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. 2025ರ ವೇಳೆಗೆ ಅಪ್ರಾಪ್ತರ ವೀಲಿಂಗ್ ಕೇಸ್ಗಳಲ್ಲಿ ಬರೋಬ್ಬರಿ 70% ರಷ್ಟು ಏರಿಕೆಯಾಗಿದೆ. ಇದು ಪೋಷಕರು ಮತ್ತು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇನ್ನು ಮುಂದೆ ಮಕ್ಕಳು ತಪ್ಪು ಮಾಡಿದರೆ ಪೋಷಕರು ಸುಮ್ಮನೆ ಇರುವಂತಿಲ್ಲ. ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವ ಪೋಷಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಸಂಚಾರಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ವಾಹನ ಕೊಟ್ಟ ಮಾಲೀಕರು ಅಥವಾ ಪೋಷಕರ ವಿರುದ್ಧವೂ ಎಫ್ಐಆರ್ ದಾಖಲಿಸಲಾಗುತ್ತಿದೆ. ಹೊಸಕೋಟೆ ಅಪಘಾತದ ನಂತರವಾದರೂ ಪೋಷಕರು ಮತ್ತು ಮಕ್ಕಳು ಎಚ್ಚೆತ್ತುಕೊಳ್ಳಬೇಕಿದೆ. ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವುದು ಕಾನೂನು ಬಾಹಿರ ಮಾತ್ರವಲ್ಲ, ಅದು ಪ್ರಾಣಕ್ಕೆ ಕುತ್ತು ತರುವ ಕೆಲಸ. ಹೀಗಾಗಿ ಯಾವುದೇ ಕಾರಣಕ್ಕೂ ಲೈಸೆನ್ಸ್ ಇಲ್ಲದ ಮಕ್ಕಳ ಕೈಗೆ ವಾಹನ ನೀಡಬೇಡಿ ಎಂದು ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.






Be the first to comment
Leave a Reply