
ವಿಜಯ್ ಮಲ್ಯ ಭಾರತಕ್ಕೆ ಮರಳುತ್ತಾರಾ ಎಂಬ ಪ್ರಶ್ನೆಯೊಂದು ಇದೀಗ ಹುಟ್ಟಿಕೊಂಡಿದೆ. ಉದ್ಯಮಿ ವಿಜಯ ಮಲ್ಯ ಬಾಂಬೆ ಹೈಕೋರ್ಟ್‌ಗೆ ನೀಡಿದ ಹೇಳಿಕೆ ಕೂತುಹಲ ಸೃಷ್ಟಿಸಿದೆ. ತಾನು ಈಗಲೇ ಭಾರತಕ್ಕೆ ಬರಲು ಸಾಧ್ಯವೇ ಎಂಬುದರ ಬಗ್ಗೆ ಅವರು ಕೆಲವು ಅಡ್ಡಿಗಳನ್ನೇ ಸೂಚಿಸಿದ್ದಾರಾ? ವಿದೇಶಿ ನ್ಯಾಯಾಲಯಗಳ ಆದೇಶಗಳು ತನ್ನ ಪ್ರಯಾಣಕ್ಕೆ ತಡೆ ಆಗಿದೆಯೇ? ಹೀಗಾಗಿ ಮಲ್ಯ ಯಾವಾಗ ವಾಪಸ್ ಬರುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಕುರಿತು ಅವರು ಕೋರ್ಟ್‌ಗೆ ಹೇಳಿದ ಮಾತೊಂದು ಈಗ ವೈರಲ್ ಆಗಿದೆ. ಅದೇನು ಗೊತ್ತಾ? ಹೇಳ್ತೀವಿ ಕೇಳಿ..
ಉದ್ಯಮಿ ವಿಜಯ್ ಮಲ್ಯ ಭಾರತಕ್ಕೆ ತಕ್ಷಣ ಮರಳಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಬ್ರಿಟನ್‌ನ ಇಂಗ್ಲೆಂಡ್ ಮತ್ತು ವೇಲ್ಸ್ ನ್ಯಾಯಾಲಯಗಳ ಆದೇಶದ ಕಾರಣದಿಂದ ತಾನು ದೇಶ ತೊರೆಯಲು ಅಥವಾ ಹೊಸ ಪ್ರಯಾಣ ದಾಖಲೆಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಆದ್ದರಿಂದ ಭಾರತಕ್ಕೆ ಯಾವಾಗ ಬರುತ್ತೇನೆ ಎಂದು ನಿಖರ ದಿನಾಂಕ ಹೇಳಲು ಆಗುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮಲ್ಯ ಈಗ ಬ್ರಿಟನ್‌ನಲ್ಲಿ ಇದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನ ಪ್ರಶ್ನಿಸಲು ಅವರು ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ವಿಶೇಷವಾಗಿ 2018ರಲ್ಲಿ ಜಾರಿಗೆ ಬಂದ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯ ಕೆಲವು ವಿಧಿಗಳನ್ನು ಅವರು ಪ್ರಶ್ನಿಸುತ್ತಿದ್ದಾರೆ. ಈ ಕಾಯ್ದೆಯಡಿಯಲ್ಲಿ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿದೆ.
ಹೈಕೋರ್ಟ್ ಈ ಹಿಂದೆ ಮಲ್ಯ ಅವರು ಭಾರತದಲ್ಲಿದ್ದರೆ ಮಾತ್ರ ಅವರ ಅರ್ಜಿಯನ್ನು ವಿಚಾರಣೆ ಮಾಡಲಾಗುವುದು ಎಂದು ಹೇಳಿತ್ತು. ಡಿಸೆಂಬರ್ 2025ರಲ್ಲಿ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಹಾಗೂ ನ್ಯಾಯಮೂರ್ತಿ ಗೌತಮ್ ಅಂಕರ್ ಅವರ ಪೀಠವು, ಮಲ್ಯ ಅವರು ಮೊದಲು ಭಾರತಕ್ಕೆ ಮರಳಬೇಕು ಎಂದು ಸ್ಪಷ್ಟಪಡಿಸಿತು. ಆದರೆ ಮಲ್ಯ ಅವರು ತಮ್ಮ ಹೇಳಿಕೆಯಲ್ಲಿ, ಕೆಲವು ಹಿಂದಿನ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ. ಕೆಲ ಪ್ರಕರಣಗಳಲ್ಲಿ ಆರೋಪಿಗಳ ಗೈರುಹಾಜರಿಯಲ್ಲಿ ವಿಚಾರಣೆ ನಡೆದಿದ್ದು, ಕೆಲವು ಎಫ್‌ಐಆರ್‌ಗಳು ರದ್ದುಪಡಿಸಲ್ಪಟ್ಟಿದ್ದವು ಎಂದು ಅವರು ಹೇಳಿದ್ದಾರೆ. ಹೀಗಾಗಿ ತಮ್ಮ ಅರ್ಜಿಯನ್ನು ಕೂಡ ವಿಚಾರಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
FEO ಕಾಯ್ದೆಯ ಮುಖ್ಯ ಉದ್ದೇಶ ಬ್ಯಾಂಕುಗಳಿಂದ ಪಡೆದ ಸಾಲಗಳನ್ನು ವಸೂಲಿ ಮಾಡುವುದು. ಈ ಪ್ರಕರಣದಲ್ಲಿ ಬ್ಯಾಂಕುಗಳು ಈಗಾಗಲೇ ಬಹುತೇಕ ಹಣವನ್ನು ವಾಪಸು ಪಡೆದಿವೆ ಎಂದು ಅವರು ಹೇಳಿದ್ದಾರೆ. ಆದರೂ ಇನ್ನೂ ಹೆಚ್ಚಿನ ಹಣವನ್ನು ಕೇಳಲಾಗುತ್ತಿದೆ ಎಂದು ಮಲ್ಯ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಮತ್ತು ವಕೀಲ ಆದರ್ಶ್ ವ್ಯಾಸ್ ಅವರು ಮಲ್ಯ ಅವರ ಅರ್ಜಿಯನ್ನು ವಿಚಾರಣೆ ಮಾಡಬಾರದು ಎಂದು ವಾದಿಸಿದರು. ಅವರ ಪಾಸ್‌ಪೋರ್ಟ್ ರದ್ದು ಆಗಿದ್ದರೂ, ಸರ್ಕಾರ ಬಯಸಿದರೆ ಪ್ರಯಾಣದ ದಾಖಲೆಗಳನ್ನು ವ್ಯವಸ್ಥೆ ಮಾಡಬಹುದು ಎಂದು ಸರ್ಕಾರದ ಪರ ವಾದಿಸಲಾಗಿದೆ.






Be the first to comment
Leave a Reply