ಸಂಕಷ್ಟದಲ್ಲಿರುವ ಮಹಿಳೆಯ ನೆರವಿಗೆ ಧಾವಿಸಲಿದೆ ಅಕ್ಕ ಪಡೆ; ಏನಿದು ಯೋಜನೆ? ಹೇಗೆ ಕಾರ್ಯ ನಿರ್ವಹಿಸುತ್ತೆ?

Akka Pade: ಮಹಿಳೆಯರ ಸುರಕ್ಷತೆ ಹಾಗೂ ಸಬಲೀಕರಣವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಾಜ್ಯದಲ್ಲಿ ಅಕ್ಕ ಪಡೆ ಯೋಜನೆಯನ್ನು ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಹತ್ವಾಕಾಂಕ್ಷಿಯ ಈ ಯೋಜನೆಯನ್ನು ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗೃಹ ಇಲಾಖೆ ಸಂಯುಕ್ತವಾಗಿ ಆರಂಭಿಸಿವೆ.

ಬೆಳಗಾವಿ, ಫೆ. 19: ಮಹಿಳೆಯರ ಸುರಕ್ಷತೆ ಹಾಗೂ ಸಬಲೀಕರಣವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅಕ್ಕ ಪಡೆ (Akka Pade) ಯೋಜನೆಯನ್ನು ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಹತ್ವಾಕಾಂಕ್ಷಿಯ ಈ ಯೋಜನೆಯನ್ನು ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗೃಹ ಇಲಾಖೆ ಸಂಯುಕ್ತವಾಗಿ ಆರಂಭಿಸಿವೆ.

ಈ ಯೋಜನೆಯಡಿ ಪ್ರತಿಯೊಂದು ಘಟಕಕ್ಕೆ ನಾಲ್ಕು ಮಹಿಳಾ ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಅಕ್ಕ ಪಡೆ ತಂಡಗಳು ಪೊಲೀಸ್ ಇನ್ಸ್‌ಪೆಕ್ಟರ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿವೆ.

ಅಕ್ಕ ಪಡೆ ತಂಡದ ಮುಖ್ಯ ಉದ್ದೇಶ
  • ಸಾರ್ವಜನಿಕ ಸ್ಥಳಗಳು, ಕೆಲಸದ ಸ್ಥಳಗಳು, ವಿದ್ಯಾ ಸಂಸ್ಥೆಗಳು ಹಾಗೂ ಆನ್‌ಲೈನ್‌ನಲ್ಲಿ ಮಹಿಳೆಯರ ವಿರುದ್ಧ ನಡೆಯುವ ಕಿರುಕುಳ, ಹಿಂಬಾಲನೆ (ಸ್ಟಾಕಿಂಗ್) ಹಾಗೂ ಈವ್ ಟೀಸಿಂಗ್ ತಡೆಗಟ್ಟುವುದು.
  • ಗುಪ್ತವಾಗಿ ಅಪರಾಧಿಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳುವುದು.
  • ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿ ತಕ್ಷಣ ದೂರು ನೀಡಲು ಪ್ರೋತ್ಸಾಹಿಸುವುದು.
  • ಸಣ್ಣ ಅಥವಾ ಮೊದಲ ಬಾರಿಗೆ ತಪ್ಪು ಮಾಡಿದವರನ್ನು ಅಗತ್ಯವಿದ್ದಲ್ಲಿ ಸಲಹೆ-ಮಾರ್ಗದರ್ಶನ ಮೂಲಕ ಸುಧಾರಿಸುವುದು.
  • ಶಾಲೆಗಳು, ಕಾಲೇಜುಗಳು ಹಾಗೂ ಕೆಲಸದ ಸ್ಥಳಗಳಲ್ಲಿ ಜಾಗೃತಿ ಮತ್ತು ಆತ್ಮರಕ್ಷಣೆ ಕಾರ್ಯಕ್ರಮಗಳನ್ನು ನಡೆಸುವುದು.
ಅಕ್ಕ ಪಡೆ ಸದಸ್ಯರಿಗೆ ವಿಶೇಷ ತರಬೇತಿ
  • ಲಿಂಗ ಸಂವೇದನೆ ಹಾಗೂ ಕಾನೂನು ಅರಿವು
  • ಕ್ಷೇತ್ರ ಕಣ್ಗಾವಲು ಮತ್ತು ನಿಗಾವಳಿ ವಿಧಾನಗಳು
  • ಸಂವಹನ ಮತ್ತು ಸಲಹಾ ಕೌಶಲ್ಯಗಳು
  • ಸೈಬರ್ ಸುರಕ್ಷತೆ ಅರಿವು
  • ದಾಖಲೆ ನಿರ್ವಹಣೆ ಹಾಗೂ ಪ್ರಕರಣ ನಿರ್ವಹಣೆ
    ಕ್ಷೇತ್ರ ಮಟ್ಟದ ಕಾರ್ಯಗಳು

    ಅಕ್ಕ ಪಡೆ ತಂಡಗಳು ಪ್ರತಿದಿನ ಶಾಲೆಗಳು, ಕಾಲೇಜುಗಳು, ಬಸ್ ನಿಲ್ದಾಣಗಳು, ಮಾರುಕಟ್ಟೆಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಕೆಳಗಿನ ಜಾಗೃತಿ ಕಾರ್ಯಗಳನ್ನು ನಡೆಸಲಿವೆ.

    • ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು.
    • ಸೈಬರ್ ಅಪರಾಧ ತಡೆ ಕುರಿತು ಮಾಹಿತಿ ನೀಡುವುದು.
    • ಮಹಿಳೆಯರಿಗೆ ಲಭ್ಯವಿರುವ ಸುರಕ್ಷತಾ ವ್ಯವಸ್ಥೆಗಳು ಹಾಗೂ ದೂರು ನೀಡುವ ವಿಧಾನಗಳನ್ನು ತಿಳಿಸುವುದು.
    • ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು.
    • ಮೂಲಭೂತ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸುವುದು.

    ಹಲ್ಲೆ ಅಥವಾ ಕಿರುಕುಳ ಘಟನೆಗಳನ್ನು ಪತ್ತೆಹಚ್ಚಲು ಅಗತ್ಯವಿದ್ದಲ್ಲಿ ತಂಡದ ಸದಸ್ಯರು ಗುಪ್ತ ಕ್ಯಾಮೆರಾ ಸೇರಿದಂತೆ ಸೂಕ್ತ ನಿಗಾವಳಿ ಸಾಧನಗಳನ್ನು ಬಳಸಿಕೊಂಡು ಸಾಕ್ಷ್ಯ ಸಂಗ್ರಹಿಸಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

    ಅಕ್ಕ ಮಹಿಳಾ ಸಹಾಯವಾಣಿ (ವಾಟ್ಸ್‌ಆ್ಯಪ್‌ ಸೇವೆ)

    ಮಹಿಳೆಯರು ಹಾಗೂ ಬಾಲಕಿಯರಿಗೆ ಆನ್‌ಲೈನ್ ನೆರವು ನೀಡಲು ಅಕ್ಕ ಸಹಾಯವಾಣಿ ವಾಟ್ಸ್‌ಆ್ಯಪ್‌ ಸಂಖ್ಯೆ – 8277951185 ಪ್ರಾರಂಭಿಸಲಾಗಿದೆ. ಈ ಸಂಖ್ಯೆಯ ಮೂಲಕ ಈ ಸೇವೆಗಳು ಲಭ್ಯ:

    • ಕಾನೂನು ಸಲಹೆ ಮತ್ತು ಮಾರ್ಗದರ್ಶನ
    • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಗಳ ಮಾಹಿತಿ
    • ಮಾನಸಿಕ ಸಲಹೆ (Psychological counselling)
    • ಸೈಬರ್ ಅಪರಾಧ ಸಂಬಂಧಿತ ಸಲಹೆ
    • ಅಕ್ಕ ಪಡೆ ಹಾಗೂ ಅಕ್ಕ ಸಹಾಯವಾಣಿ ಆರಂಭವು ಮಹಿಳೆಯರ ಸುರಕ್ಷತೆ ಹೆಚ್ಚಿಸಲು ಕೈಗೊಳ್ಳಲಾದ ಮಹತ್ವದ ಹೆಜ್ಜೆ ಎನಿಸಿಕೊಂಡಿದೆ. ಈ ಯೋಜನೆಯ ಮೂಲಕ ಪೊಲೀಸ್ ಇಲಾಖೆಯು ತಳ ಮಟ್ಟದಲ್ಲಿಯೂ ಹಾಗೂ ಡಿಜಿಟಲ್ ಮೂಲಕವೂ ಮಹಿಳೆಯರೊಂದಿಗೆ ಸಂಪರ್ಕ ಸಾಧಿಸಿ ಅವರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಬದ್ಧವಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image