
ತುಮಕೂರು: ತುರುವೇಕೆರೆ ತಾಲೂಕಿನ BEO ಕಚೇರಿಯಲ್ಲಿ FDA ಆಗಿ ಕೆಲಸ ಮಾಡುತಿದ್ದ ಮಹಿಳೆಯನ್ನ ಆಕೆಯ ಸಾಕು ಮಗ ಮತ್ತು ಸಹೋದರಿಯೇ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿರುವ ಘಟನೆ ಚಿಕ್ಕನಾಯಕನಹಳ್ಳಿಯ ಜೋಗಿಹಳ್ಳಿಯಲ್ಲಿ ನಡೆದಿದೆ. ಜಯಲಕ್ಷ್ಮೀ ಮೃತ ಮಹಿಳೆಯಾಗಿದ್ದು, ಆರೋಪಿಗಳಾದ ಅನುಸೂಯಾ ಮತ್ತು ಚಂದ್ರಶೇಖರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಜಯಲಕ್ಷ್ಮೀ ಹೃದಯಾಘಾತದಿಂದ ಮೃತಪಟ್ಟಿರೋದಾಗಿ ಎಲ್ಲರನ್ನೂ ನಂಬಿಸಿದ್ದ ಆರೋಪಿಗಳ ಬಂಡವಾಳ ಪೊಲೀಸ್ ತನಿಖೆ ವೇಳೆ ಬಯಲಾಗಿದ್ದು, ಗಂಡನನ್ನು ಕಳೆದುಕೊಂಡಿದ್ದ ಮೃತ ಮಹಿಳೆಗೆ ಮಕ್ಕಳೂ ಇರಲಿಲ್ಲ ಎನ್ನಲಾಗಿದೆ.
ಇನ್ನು ಜಯಲಕ್ಷ್ಮೀ ಸಾವಿನ ಬಗ್ಗೆ ಅನುಮಾನಗೊಂಡ ಶ್ರೀನಿವಾಸ್ ಎಂಬಾತ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಆಧಾರದ ಮೇಲೆ ತನಿಖೆಗಿಳಿದ ಪೊಲೀಸರು, ಅಂತ್ಯಕ್ರಿಯೆಗೆ ಸಿದ್ಧಗೊಂಡಿದ್ದ ಶವವನ್ನು ಮರಣೊತ್ತರ ಪರಿಕ್ಷೆಗೆ ರವಾನೆ ಮಾಡಿದ್ದಾರೆ. ಬಳಿಕ ಆಕೆಯ ಜೊತೆ ವಾಸವಿದ್ದ ಸಾಕು ಮಗ ಚಂದ್ರಶೇಖರ್ ಹಾಗೂ ತಂಗಿ ಅನುಸೂಯಾ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇವರೇ ತಡರಾತ್ರಿ ಜಯಲಕ್ಷ್ಮೀ ಉಸಿರುಗಟ್ಟಿಸಿ ಕೊಂದಿರೊದು ಬೆಳಿಕಿಗೆ ಬಂದಿದೆ.
ಜಯಲಕ್ಷ್ಮೀ ಸಾವಿನ ಬಗ್ಗೆ ಅನುಮಾನಗೊಂಡು ದೂರು ನೀಡಿದ್ದ ಶ್ರೀನಿವಾಸ್ ಅಸಲಿಗೆ ಆಕೆಯ ಗೆಳಯ ಎಂಬುದು ಗೊತ್ತಾಗಿದೆ. ಪೊಲೀಸ್ ಮಾಹಿತಿ ಪ್ರಕಾರ ಗಂಡನ ಕಳೆದುಕೊಂಡಿದ್ದ ಜಯಲಕ್ಷ್ಮೀಗೆ ಕಳೆದ 20 ವರ್ಷಗಳ ಹಿಂದೆ ಶ್ರೀನಿವಾಸ್ ಪರಿಯವಾಗಿತ್ತು. ಆ ಬಳಿಕ ಇಬ್ಬರಲ್ಲೂ ಆತ್ಮೀಯತೆ ಹೆಚ್ಚಾಗಿ ಒಟ್ಟಿಗೆ ಸಂಸಾರ ಮಾಡುತಿದ್ದರು. ಇದರ ನಡುವೆ ಮಕ್ಕಳಿಲ್ಲದ ಕಾರಣಕ್ಕೆ ಈಕೆ ತನ್ನ ಸಹೋದರಿ ಅನುಸೂಯಾ ಮಗ ಚಂದ್ರಶೇಖರ್ನ ದತ್ತು ಪಡೆದುಕೊಂಡು ಸಾಕಿಕೊಂಡಿದ್ದಳು. ಇನ್ನು ತುಮಕೂರಿನಲ್ಲಿ ವಾಸವಾಗಿದ್ದ ಅನುಸೂಯಾ ಹಾಗೂ ಚಂದ್ರಶೇಖರ್ ಕಳೆದ ಎಂಟು ತಿಂಗಳ ಹಿಂದೆ ಚಿಕ್ಕನಾಯಕನಹಳ್ಳಿಯ ಜೋಗಿಹಳ್ಳಿಯ ಜಯಲಕ್ಷ್ಮೀ ನಿವಾಸಕ್ಕೆ ಬಂದಿದ್ದರು. ಈ ವೇಳೆ ಶ್ರೀನಿವಾಸ್ಗೆ ಒತ್ತಡ ಹಾಕಿದ್ದ ಇವರು, ಆತ ಮನೆ ಬಿಡುವಂತೆ ಮಾಡಿದ್ದರು. ಇಷ್ಟೆಲ್ಲ ನಡೆದ ಬಳಿಕ ಜಯಲಕ್ಷ್ಮೀ ತುರುವೆಕೆರೆಯಲ್ಲಿ ಮನೆ ಮಾಡಲು ನಿರ್ಧರಿಸಿದ್ದು, ಅದರಂತೆ ಬಾಡಿಗೆ ಮನೆಗೆ ಅಡ್ವಾನ್ಸ್ ಕೂಡ ಕೊಟ್ಟಿದ್ದರು. ಈಕೆ ಮನೆ ತೊರೆಯುತ್ತಿರುವ ವಿಚಾರ ತಿಳಿದ ಅನುಸೂಯಾ ಮತ್ತು ಚಂದ್ರಶೇಖರ್ ಉಸಿರುಗಟ್ಟಿಸಿ ಕೊಲೆಗೈದಿರೋದು ತನಿಖೆ ವೇಳೆ ಗೊತ್ತಾಗಿದೆ. ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು, ವಿಚಾರಣೆ ಮುಂದುವರಿಸಿದ್ದಾರೆ. ಕೊಲೆಗೆ ಆರ್ಥಿಕ ಹಾಗೂ ಅನುಕಂಪದ ಆಧಾರಿತ ಸರ್ಕಾರಿ ನೌಕರಿ ಕಾರಣ ಎಂಬ ಅನುಮಾನ ಮೂಡಿದ್ದು, ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.






Be the first to comment
Leave a Reply