
ಬೆಂಗಳೂರು: ಕರ್ನಾಟಕದ ನಾಲ್ವರು ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಬೆಳಗ್ಗೆ ಎದ್ದು ಬಾಗಿಲು ತೆಗೆಯುವ ಹೊತ್ತಿಗೆ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಆಸ್ತಿ ಗಳಿಕೆ ಕೇಸ್ನಲ್ಲಿ ಮನೆ ಬಾಗಿಲು ಮುಂದೆ ಹಾಜರಾಗಿದ್ದಾರೆ. ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ಮಾಡಿದ್ದು, ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಕರ್ನಾಟಕ ಸ್ಟೇಟ್ ಹೈವೇ ಡೆವಲಪ್ಮೆಂಟ್ ಪ್ರಾಜೆಕ್ಟ್ನ ಚೀಫ್ ಇಂಜಿನಿಯರ್ ಪುರುಷೋತ್ತಮ ದಾಸ ಹೆಗ್ಡೆ, ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀಕ್ಷಕ ಅಭಿಯಂತರ ಹೆಚ್.ಎಂ.ಜನಾರ್ದನ, ಬೆಸ್ಕಾಂ ಇಂಜಿನಿಯರ್ R.H.ಅರ್ಜುನ್ ಮತ್ತು ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸೋಮಲಿಂಗಪ್ಪ.
ಈ ನಾಲ್ವರು ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ ಸ್ನೇಹಿತರ ನಿವಾಸದ ಮೇಲೂ ದಾಳಿ ಮಾಡಿಲಾಗಿದೆ. ಪ್ರಮುಖವಾಗಿ ಬೆಂಗಳೂರಿನ ಬನಶಂಕರಿಯಲ್ಲಿರುವ ಪುರುಷೋತ್ತಮ ದಾಸ ಹೆಗ್ಡೆ ಅವರ ಅದ್ಧೂರಿ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ. ಈ ವೇಳೆ ನಗದು, ಚಿನ್ನಾಭರಣ, ಆಸ್ತಿ ದಾಖಲೆಗಳು, ಎರಡು ಶಾಲೆಗಳಿಗೆ ಟ್ರಸ್ಟಿ ಆಗಿರುವುದು, ಮೈಸೂರಿನಲ್ಲಿ ಮನೆಗಳನ್ನು ಹೊಂದಿರುವುದು ಪತ್ತೆಯಾಗಿದೆ. ಸಂಪೂರ್ಣ ದಾಳಿ ಬಳಿಕ ಅಂಕಿ-ಅಂಶಗಳು ಪತ್ತೆಯಾಗಲಿದೆ.
ಮತ್ತೊಂದು ಕಡೆ ಬೆಂಗಳೂರು ಗ್ರಾಮಾಂತರ ವಿಭಾಗದ ಲೋಕಾಯುಕ್ತ ಅಧಿಕಾರಿಗಳು ಹೆಚ್.ಎಂ.ಜನಾರ್ದನ ನಿವಾಸ ಹಾಗೂ ಇತರ ಕಡೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಜನಾರ್ದನ ಸ್ನೇಹಿತ ಸುಜಯ್ ಶೆಟ್ಟಿ ಎಂಬುವವರ ಮನೆಯಲ್ಲಿ ಒಂದು ಕೋಟಿ ಎಪ್ಪತ್ತು ಲಕ್ಷ ನಗದು ಪತ್ತೆಯಾಗಿದೆ. ಈ ಹಣದ ಮೂಲದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ.
ಆಸ್ತಿ ಪತ್ರ ಹಾಗೂ ಚಿನ್ನಾಭರಣ, ಬೆಳ್ಳಿ ಪತ್ತೆ!
ದಾವಣಗೆರೆ ನಗರದಲ್ಲಿ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಬೆಸ್ಕಾಂನ ಸಿವಿಲ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಇಂಜಿನಿಯರ್ R.H.ಅರ್ಜುನ್ ಮನೆ, ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ನಗರದ ನಿಟ್ಟುವಳ್ಳಿಯಲ್ಲಿರುವ ರೂಂ, ಕಚೇರಿ ಹಾಗೂ ಶಿವಮೊಗ್ಗದ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡಿದ್ದು, ಶಿವಮೊಗ್ಗದ ಮನೆಯಲ್ಲಿ ಆಸ್ತಿ ಪತ್ರ ಹಾಗೂ ಚಿನ್ನಾಭರಣ, ಬೆಳ್ಳಿ ಪತ್ತೆ ಆಗಿದೆ. ಇತ್ತ ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಸರ್ವೆ ಇಲಾಖೆಯ ಸೂಪರ್ವೈಸರ್ ಸೋಮಲಿಂಗಪ್ಪ ಮನೆ, ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಮುರಗೋಡದಲ್ಲಿರುವ ಮನೆ ಮೇಲೂ ದಾಳಿ ಮಾಡಲಾಗಿದೆ. ಒಟ್ಟು ನಾಲ್ಕು ಕಡೆಯಲ್ಲಿ ದಾಳಿ ನಡೆಸಿ ಆಸ್ತಿ ದಾಖಲೆಗಳು ವಶಕ್ಕೆ ಪಡೆಯಲಾಗಿದೆ.






Be the first to comment
Leave a Reply