
ಬೆಂಗಳೂರು: ಸಿಎಂ ಕುರ್ಚಿ ಕದನ, ಸಚಿವ ಸಂಪುಟ ವಿಸ್ತರಣೆ ವಿಚಾರ ಸೇರಿ ಹಲವು ಕಾರಣಗಳಿಂದ ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿರುವ ನಡುವೆಯೇ ಹೊಸ ಪದ್ಧತಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ನಾಂದಿ ಹಾಡಿರುವ ವಿಚಾರವೀಗ ಪಕ್ಷದೊಳಗೆ ಹೊಸ ಚರ್ಚೆಗೆ ನಾಂದಿ ಹಾಡಿದೆ. ಕಾಂಗ್ರೆಸ್ನ ಕೆಲವೊಂದು ಜಿಲ್ಲಾ ಘಟಕಗಳಿಗೆ ಕಾರ್ಯಾಧ್ಯಕ್ಷರ ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆದೇಶಿಸಿರೋದಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಡಿಸಿಸಿ ಅಧ್ಯಕ್ಷರಿಗೆ ಸಮಾನಾಂತರವಾಗಿ ಹೊಸ ಹುದ್ದೆ ಸೃಷ್ಟಿಸಿ ಗೊಂದಲ ಸೃಷ್ಟಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ತಮಗೆಲ್ಲಿ ಬೇಕೋ ಅಲ್ಲಷ್ಟೇ ಕಾರ್ಯಾಧ್ಯಕ್ಷರ ನೇಮಕ ಮಾಡಲಾಗುತ್ತಿದೆ ಎಂದು ಡಿಸಿಸಿ ಘಟಕಗಳು ಕಿಡಿಕಾರಿವೆ.
ಜಿಲ್ಲಾ ಸಮಿತಿಗಳ ಕಾರ್ಯಾಧ್ಯಕ್ಷರಿಗೆ ನೀಡಿರುವ ಟಾಸ್ಕ್ ಬಗ್ಗೆಯೂ ದೊಡ್ಡ ಗುಮಾನಿ ಇದ್ದು, ಕಾಂಗ್ರೆಸ್ ಸಮಿತಿಗಳಲ್ಲೇ ಡಿ.ಕೆ. ಶಿವಕುಮಾರ್ ಪರ್ಯಾಯ ನಾಯಕರನ್ನು ಹುಟ್ಟು ಹಾಕುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಹೊಸ ಹುದ್ದೆಗಳ ಸೃಷ್ಟಿ ಮೂಲಕ 2028ರ ಚುನಾವಣೆಗೆ ಈಗಿನಿಂದಲೇ ಮೆಗಾಪ್ಲ್ಯಾನ್ ಮಾಡಲಾಗುತ್ತಿದೆ ಎಂಬ ಚರ್ಚೆಯೂ ಶುರುವಾಗಿದ್ದು, ಈ ಮೂಲಕ ಟಾಸ್ಕ್ ಮತ್ತು ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ. ಜಿಲ್ಲಾ ಮಟ್ಟದ ಕಾರ್ಯಾಧ್ಯಕ್ಷರ ನೇಮಕದ ಹಿಂದೆ ಹತ್ತಾರು ಪ್ಲ್ಯಾನ್ ಇದ್ದು, ಎಲ್ಲೆಲ್ಲಿ ಡಿಸಿಸಿ ಅಧ್ಯಕ್ಷರ ಕಾರ್ಯದ ಬಗ್ಗೆ ಸಮಾಧಾನವಿಲ್ಲವೋ ಅಲ್ಲಿ ಕಾರ್ಯಾಧ್ಯಕ್ಷರ ನೇಮಕ ಮಾಡಲಾಗಿದೆ ಎನ್ನಲಾಗಿದೆ.
ಡಿಕೆಶಿ ಲೆಕ್ಕಾಚಾರವೇನು?
ಶಾಸಕರ ಕಾರ್ಯವಿಧಾನ, ಜನರ ಸಂಪರ್ಕ ಮತ್ತು 2028ಕ್ಕೆ ಹಾಲಿ ಶಾಸಕರ ಸೋಲು-ಗೆಲುವಿನ ಬಗ್ಗೆಯೂ ಸರ್ವೆಗೆ ಡಿಕೆಶಿ ಪರೋಕ್ಷ ಸೂಚನೆ ನೀಡಿದ್ದಾರೆ. ಆ ಮೂಲಕ ಹಾಲಿ ಶಾಸಕರ ಕ್ಷೇತ್ರಗಳ ಬಗ್ಗೆ ಈಗಿನಿಂದಲೇ ವರದಿ ಪಡೆಯುವ ಜೊತೆಗೆ, ಪರಾಜಿತ ಅಭ್ಯರ್ಥಿಗಳಿಂದ ಪಕ್ಷ ಸಂಘಟನೆಗೂ ಪ್ಲ್ಯಾನ್ ನಡೆದಿದೆ. ಅಲ್ಲದೆ ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಸದ್ಯದ ಸ್ಥಿತಿಗತಿ ಬಗ್ಗೆಯೂ ವಿವರ ಸಂಗ್ರಹಣೆಗೆ ಶಿವಕುಮಾರ್ ಸೂಚಿಸಿದ್ದು, ಕ್ಷೇತ್ರ ಬದಲಾವಣೆ ಮತ್ತು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಈಗಿನಿಂದಲೇ ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಡಿಸಿಸಿ ಅಧ್ಯಕ್ಷರಿಗೆ ಪೈಪೋಟಿ ನೀಡುವಂತೆ ಕಾರ್ಯಾಧ್ಯಕ್ಷರ ಕೆಲಸ ಸಾಗುವ ಸಾಧ್ಯತೆ ಇದೆ ಎನ್ನಲಾಗಿದೆ.






Be the first to comment
Leave a Reply