ಇರಾನ್‌ನ ಸುಪ್ರೀಂ ಲೀಡರ್‌ ಆಗಿ ಆಯತೊಲ್ಲಾ ಅಲಿ ಮೊಜ್ತಾಬಾ ಆಯ್ಕೆ: ಖಮೇನಿ ಮಗನೇ ಇರಾನ್ ನೂತನ ಸುಪ್ರೀಂ ಲೀಡರ್‌

ಇರಾನ್‌ನ ಸುಪ್ರೀಂ ಲೀಡರ್‌ ಆಗಿ ಆಯತೊಲ್ಲಾ ಅಲಿ ಮೊಜ್ತಾಬಾ ಆಯ್ಕೆ: ಖಮೇನಿ ಮಗನೇ ಇರಾನ್ ನೂತನ ಸುಪ್ರೀಂ ಲೀಡರ್‌

ಇರಾನ್‌ನ ನೂತನ ಸರ್ವೋಚ್ಚ ನಾಯಕನಾಗಿ ಮೊಜ್ತಬಾ ಖಮೇನಿ ನೇಮಕಗೊಂಡಿದ್ದಾರೆ. ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಈ ಮಹತ್ವದ ಹುದ್ದೆಯನ್ನು ವಹಿಸಿಕೊಂಡಿದ್ದಾರೆ. ಧಾರ್ಮಿಕ ಶಿಕ್ಷಣ ಪಡೆದ ಮೊಜ್ತಬಾ, ಕ್ರಾಂತಿಕಾರಿ ಗಾರ್ಡ್‌ನಲ್ಲಿ ಸೇವೆ ಸಲ್ಲಿಸಿದ್ದರು ಮತ್ತು ತಂದೆಯ ವಿಶ್ವಾಸಾರ್ಹ ಸಲಹೆಗಾರರಾಗಿದ್ದರು. ಈ ನೇಮಕವು ಇರಾನ್‌ನ ರಾಜಕೀಯ ಭವಿಷ್ಯ ಮತ್ತು ಪ್ರಾದೇಶಿಕ ಸ್ಥಿರತೆಯ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದು ಕುತೂಹಲಕಾರಿಯಾಗಿದೆ.

ಇರಾನ್​​ನ ಸರ್ವೋಚ್ಚ ನಾಯಕರಾಗಿದ್ದ ಅಲಿ ಖಮೇನಿ ಇಸ್ರೇಲ್, ಅಮೆರಿಕ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದರು. ಈಗ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ದೇಶದ ಹೊಸ ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಫೆಬ್ರವರಿ 28ರಂದು ಟೆಹ್ರಾನ್​​ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಲಿ ಖಮೇನಿ ಅವರ ಕಚೇರಿಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ಆ ದಾಳಿಯಲ್ಲಿ ಖಮೇನಿ ಸಾವನ್ನಪ್ಪಿದ್ದರು. ಈ ಘಟನೆಯ ನಂತರ ಇರಾನ್ ಏಳು ದಿನಗಳ ಸಾರ್ವಜನಿಕ ರಜೆಯೊಂದಿಗೆ 40 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ದೇಶಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪ್ರಮುಖ ನಗರಗಳು ಮತ್ತು ಸರ್ಕಾರಿ ಕಟ್ಟಡಗಳ ಹೊರಗೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಮೊಜ್ತಬಾ ಖಮೇನಿ ಯಾರು?

ಮೊಜ್ತಬಾ ಖಮೇನಿ 1969ರಲ್ಲಿ ಮಶಾದ್ ನಗರದಲ್ಲಿ ಜನಿಸಿದರು, ಧಾರ್ಮಿಕ ಶಿಕ್ಷಣವನ್ನು ಪಡೆದರು. ಇರಾನ್-ಇರಾಕ್ ಯುದ್ಧದ ಅಂತಿಮ ಹಂತಗಳಲ್ಲಿ ಅವರು ಕ್ರಾಂತಿಕಾರಿ ಗಾರ್ಡ್​​ನಲ್ಲಿಯೂ ಸೇವೆ ಸಲ್ಲಿಸಿದ್ದರು. ಅವರನ್ನು ಬಹಳ ಹಿಂದಿನಿಂದಲೂ ತಂದೆ ತೆಗೆದುಕೊಳ್ಳುವ ನಿರ್ಧಾರಗಳ ಹಿಂದೆ ಇವರು ನಿಂತಿದ್ದರು, ಅವರಿಗೆ ತುಂಬಾ ಹತ್ತಿರವಾಗಿದ್ದರು ಎನ್ನಲಾಗಿದೆ. ಅವರು ಎಂದೂ ಸರ್ಕಾರಿ ಹುದ್ದೆಗಳನ್ನು ಹೊಂದಿಲ್ಲವಾದರೂ ಅವರು ತಮ್ಮ ತಂದೆಗೆ ವಿಶ್ವಾಸಾರ್ಹ ಸಲಹೆಗಾರರಾಗಿದ್ದರು. ಅವರು ಮಿಲಿಟರಿ ಮತ್ತು ಅರೆಸೈನಿಕ ಪಡೆಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಇರಾನ್‌ನ ಶಿಯಾ ದೇವಪ್ರಭುತ್ವ ವ್ಯವಸ್ಥೆಯಲ್ಲಿ ಸುಪ್ರೀಂ ಲೀಡರ್ ಅತ್ಯಂತ ಶಕ್ತಿಶಾಲಿ ಸ್ಥಾನವಾಗಿದೆ. ಈ ಹುದ್ದೆಯನ್ನು ಹೊಂದಿರುವ ವ್ಯಕ್ತಿ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿರುತ್ತಾರೆ ಮತ್ತು ದೇಶದ ಪ್ರಮುಖ ರಾಜಕೀಯ, ಮಿಲಿಟರಿ ಮತ್ತು ಕಾರ್ಯತಂತ್ರದ ನಿರ್ಧಾರಗಳ ಮೇಲೆ ಅಂತಿಮ ನಿರ್ಧಾರವನ್ನು ಹೊಂದಿರುತ್ತಾರೆ. ಮುಂಬರುವ ದಿನಗಳು ಅವರ ನಾಯಕತ್ವ ದೇಶವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತದೆ ಎಂಬುದನ್ನು ನೋಡಬೇಕಿದೆ.

Be the first to comment

Leave a Reply

Your email address will not be published. Required fields are marked *

ad image