ಬೆಂಗಳೂರಿನ ಸುತ್ತಮುತ್ತಲಿನ ನಗರಗಳಿಗೂ ಬಿಎಂಟಿಸಿ ಬಸ್‌‍ ಸೇವೆ ವಿಸ್ತರಣೆ

ಬೆಂಗಳೂರು, ಮಾ.5- ಬೆಂಗಳೂರಿನಿಂದ ರಾಮನಗರ, ಚೆನ್ನಪಟ್ಟಣ, ಕನಕಪುರ, ಮಾಲೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಹಂತ-ಹಂತವಾಗಿ ಬಿಎಂಟಿಸಿ ಬಸ್‌‍ ಸೇವೆಯನ್ನು ಆರಂಭಿಸಲಾಗುತ್ತಿದೆ.

ಇಂದು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿರುವ ರಾಮನಗರಕ್ಕೆ ಬೆಂಗಳೂರಿನಿಂದ ಬಿಎಂಟಿಸಿ ಬಸ್‌‍ ಸಂಚಾರಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ಬೆಂಗಳೂರು ಪಾಲಿಕೆಯಿಂದ 25ಕಿ.ಮೀ. ಅಂತರದವರೆಗೆ ಬಿಎಂಟಿಸಿ ಸಂಚಾರಕ್ಕೆ ಅನುಮತಿಸಲಾಗಿತ್ತು. ಅನಂತರ ಬಿಬಿಎಂಪಿಯ ವ್ಯಾಪ್ತಿಯ 40ಕಿ.ಮೀ. ಪರಿಧಿಯಲ್ಲಿ ಬಿಎಂಟಿಸಿ ಸಂಚರಿಸಲು ಅವಕಾಶ ನೀಡಲು ಮಂಡಳಿಯಲ್ಲಿ ಚರ್ಚಿಸಲಾಗಿತ್ತು.

ಇದನ್ನು ಈ ಕರಡು ಅಧಿಸೂಚನೆಯನ್ನು ಸಾರ್ವಜನಿಕರ ಆಕ್ಷೇಪಣೆಗೆ ಪ್ರಕಟಿಸಲಾಗಿತ್ತು. ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಅದರಂತೆ ಇಂದು ರಾಮನಗರಕ್ಕೆ ಬಿಎಂಟಿಸಿ ಬಸ್‌‍ ಸಂಚಾರವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
6 ಬಸ್‌‍ಗಳು ಪ್ರತಿ ದಿನ 36 ಟ್ರಿಪ್‌ಗಳಲ್ಲಿ ಬೆಂಗಳೂರು ಮತ್ತು ರಾಮನಗರ ನಡುವೆ ಸಂಚರಿಸಲಿವೆ. ಮುಂದಿನ ವಾರದಿಂದ ರಾಮನಗರದಿಂದಲೇ ಚನ್ನಪಟ್ಟಣಕ್ಕೂ ಬಿಎಂಟಿಸಿ ಸಂಚಾರವನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಬೆಂಗಳೂರಿನ ಬನಶಂಕರಿಯಿಂದ ಕನಕಪುರಕ್ಕೆ 8 ಬಸ್‌‍ಗಳು 48 ಟ್ರಿಪ್‌ಗಳಲ್ಲಿ ಪ್ರತಿದಿನ ಸಂಚರಿಸಲಿವೆ. ಬಿಡದಿಗೆ 12 ಬಸ್‌‍ಗಳು 78 ಟ್ರಿಪ್‌ ಸಾರಿಗೆ ಸೇವೆ ಒದಗಿಸುತ್ತಿವೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಗ್ರಾಮೀಣ ಭಾಗಕ್ಕೂ ಬೇಡಿಕೆಯನ್ನು ಆದರಿಸಿ ಬಿಎಂಟಿಸಿ ಸಂಚಾರವನ್ನು ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.

ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಈಗಾಗಲೇ ದೊಡ್ಡಬಳ್ಖಾಪುರ, ದೇವನಹಳ್ಳಿಗೆ ಬಿಎಂಟಿಸಿ ಬಸ್‌‍ ಸಂಚಾರ ಇದೆ. ಕೋಲಾರ ಜಿಲ್ಲೆಯ ಮಾಲೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೂ ಬಸ್‌‍ ಸಂಚಾರವನ್ನು ಬಹುಶಃ ಮಾ.9ರಂದು ಆರಂಭಿಸಲಾಗುವುದು.

ಬೆಂಗಳೂರು ಉತ್ತರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಎಚ್‌. ಮುನಿಯಪ್ಪ ಅವರಿಗೆ ವಿಧಾನಮಂಡಲ ಅಧಿವೇಶನದಲ್ಲಿ ಪ್ರಶ್ನೋತ್ತರದ ಕಲಾಪಗಳು ಇಲ್ಲದೇ ಇದ್ದರೆ ಬಿಎಂಟಿಸಿ ಬಸ್‌‍ ಸಂಚಾರದ ಕಾರ್ಯಕ್ರವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಮಾಗಡಿ ತಾಲ್ಲೂಕಿಗೆ ಈಗಾಗಲೆ 39 ಬಸ್‌‍ಗಳು ಸಂಚರಿಸುತ್ತಿವೆ. ಬೆಂಗಳೂರಿನಿಂದ 40ಕಿ.ಮೀ. ವ್ಯಾಪ್ತಿಯಲ್ಲಿ ಬಿಎಂಟಿಸಿ ಸಂಚಾರಕ್ಕೆ ಅವಕಾಶ ಸಿಕ್ಕಿರುವುದರಿಂದ ಸಾರ್ವಜನಿಕರಿಗೂ ಅನುಕೂಲವಾಗುತ್ತಿದೆ ಮತ್ತು ಬೆಂಗಳೂರಿನ ಒತ್ತಡ ಕೂಡ ಕಡಿಮೆಯಾಗುವ ಅಂದಾಜಿದೆ ಎಂದು ಹೇಳಿದರು.

 

Be the first to comment

Leave a Reply

Your email address will not be published. Required fields are marked *

ad image