ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಕನ್ನಡ ಪ್ರೇಮ!

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಕನ್ನಡ ಪ್ರೇಮ!

ಶಿಲ್ಪಾ ಶೆಟ್ಟಿ ಬಾಲಿವುಡ್​​ನ ಸ್ಟಾರ್ ನಟಿ ಆಗಿರುವ ಜೊತೆಗೆ ಬಲು ಯಶಸ್ವಿ ಉದ್ಯಮಿಯೂ ಸಹ ಹೌದು. ಮಂಗಳೂರು ಮೂಲದವರಾದರೂ ಸಹ ಶಿಲ್ಪಾ ಶೆಟ್ಟಿ ಬೆಳೆದಿದ್ದೆಲ್ಲ ಮುಂಬೈನಲ್ಲಿಯೇ. ಬಾಲ್ಯದಿಂದಲೂ ಮುಂಬೈನಲ್ಲೇ ಬೆಳೆದಿದ್ದರೂ ಸಹ ತಮ್ಮ ಮೂಲವಾದ ಕರ್ನಾಟಕವನ್ನು ಶಿಲ್ಪಾ ಶೆಟ್ಟಿ ಮರೆತಿಲ್ಲ. ಇತ್ತೀಚೆಗಷ್ಟೆ ಮುಂಬೈನಲ್ಲಿ ಹೋಟೆಲ್ ಒಂದನ್ನು ಶಿಲ್ಪಾ ಶೆಟ್ಟಿ ಪ್ರಾರಂಭ ಮಾಡಿದ್ದು, ಕರ್ನಾಟಕ ಥೀಮ್​​​ನ ಹೋಟೆಲ್ ಇದಾಗಿದೆ. ಮಾತ್ರವಲ್ಲದೆ ಇದಕ್ಕೆ ಇರಿಸಿರುವುದು ಸಹ ಕನ್ನಡದ ಹೆಸರನ್ನೇ.

ಶಿಲ್ಪಾ ಶೆಟ್ಟಿ ಈಗಾಗಲೇ ಬಾಸ್ಟಿಯನ್ ಹೆಸರಿನಲ್ಲಿ ಮುಂಬೈನಲ್ಲಿ ಒಂದು ಹಾಗೂ ಗೋವಾನಲ್ಲಿ ಒಂದು ಐಶಾರಾಮಿ ಹೋಟೆಲ್ ಹೊಂದಿದ್ದಾರೆ. ಆ ರೆಸ್ಟಾರೆಂಟ್​​ಗಳು ಸಿರಿವಂತರ ಮತ್ತು ಅಲ್ಟ್ರಾ ಸಿರಿವಂತರ ಹೋಟೆಲ್​​ಗಳಾಗಿವೆ. ಇದೀಗ ಅದೇ ಬಾಸ್ಟಿಯನ್ ಹೆಸರಿನಲ್ಲಿ ಮೇಲ್ಮಧ್ಯಮ ವರ್ಗದವರಿಗಾಗಿ ರೆಸ್ಟೊರೆಂಟ್ ಆರಂಭಿಸಿದ್ದಾರೆ ಶಿಲ್ಪಾ ಶೆಟ್ಟಿ. ರೆಸ್ಟಾರೆಂಟ್​​ನ ಹೆಸರು ‘ಬಾಸ್ಟಿಯನ್ ಅಮ್ಮ ಕೈ’. ಈ ರೆಸ್ಟಾರೆಂಟ್​​ ಕರ್ನಾಟಕ ಥೀಮ್​​ನ ರೆಸ್ಟಾರೆಂಟ್ ಆಗಿದ್ದು, ಇಲ್ಲಿ ಸಿಕ್ಕುವ ಖಾದ್ಯಗಳು ಕರ್ನಾಟಕದ ಜನಪ್ರಿಯ ಖಾದ್ಯಗಳೇ ಆಗಿವೆ.

ಮುಂಬೈನ ಬಾಂದ್ರಾ ವೆಸ್ಟ್​ನ ನ್ಯೂ ಲಿಂಕ್ ರಸ್ತೆಯಲ್ಲಿ ಈ ಹೋಟೆಲ್ ಅನ್ನು ಶಿಲ್ಪಾ ಶೆಟ್ಟಿ ಪ್ರಾರಂಭಿಸಿದ್ದಾರೆ. ಹೋಟೆಲ್​ನ ವಿಶೇಷತೆಯೆಂದರೆ ಅದರ ಮೆನು. ಅವರ ಮೆನುವಿನಲ್ಲಿ ಕರ್ನಾಟಕದ ಮ್ಯಾಪ್ ಅನ್ನೇ ಪ್ರಿಂಟ್ ಮಾಡಿದ್ದಾರೆ ನಟಿ. ಹೋಟೆಲ್ ಮುಂಬೈನಲ್ಲಿದ್ದರೂ ಸಹ ಖಾದ್ಯಗಳ ಹೆಸರು ಹಿಂದಿಯ ಬದಲಿಗೆ ಕನ್ನಡದಲ್ಲಿಯೇ ಇವೆ. ಮೆಣಸಿಕಾಯಿ ಬಜ್ಜಿ, ಸಬ್ಬಕ್ಕಿ ವಡೆ ಎಂದೇ ಮೆನುವಿನಲ್ಲಿದೆ. ಮುಂಬೈನಲ್ಲಿ ಈ ಖಾದ್ಯಗಳನ್ನು ಮಿರ್ಚಿ ಬಜಿ, ಸಾಬೂದಾನ ವಡಾ ಎಂದು ಕರೆಯಲಾಗುತ್ತದೆ. ಆದರೆ ಹಿಂದಿ ಹೆಸರಿನ ಬದಲಾಗಿ ಮೆನುವಿನಲ್ಲಿ ಕನ್ನಡದ ಹೆಸರುಗಳನ್ನೇ ಇರಿಸಿದ್ದಾರೆ ಶಿಲ್ಪಾ ಶೆಟ್ಟಿ. ಅದು ಮಾತ್ರವೇ ಅಲ್ಲದೆ ಮೈಸೂರು ಮಸಾಲೆ ದೋಸೆ, ದಾವಣೆಗೆರೆ ಬೆಣ್ಣೆ ದೋಸೆ, ಕೂರ್ಗಿ ಪಂದಿ ಕರಿ, ಕೂರ್ಗಿ ಚಿಕನ್, ಮಂಗಳೂರು ಗೀ ರೋಸ್ಟ್, ಬಿಸಿಬೇಳೆ ಬಾತ್, ಮಂಗಳೂರು ಸುಕ್ಕಾ, ಮೈಸೂರು ಮಸಾಲ ಮೊಟ್ಟೆ ಬುರ್ಜಿ ಇನ್ನೂ ಹಲವು ಕರ್ನಾಟದ ಖಾದ್ಯಗಳು ರೆಸ್ಟಾರೆಂಟ್​​ನಲ್ಲಿ ಲಭ್ಯವಿದೆ. ಮೆನುಕಾರ್ಡ್​​ನಲ್ಲಿ ಕರ್ನಾಟಕದ ಭೂಪಟವನ್ನೇ ಮುದ್ರಿಸಿರುವ ಶಿಲ್ಪಾ ಶೆಟ್ಟಿ, ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಸಿದ್ಧ ಖಾದ್ಯಗಳು ಮತ್ತು ಡ್ರಿಂಕ್​​ಗಳನ್ನು ತಮ್ಮ ಹೋಟೆಲ್​​ನಲ್ಲಿ ಸರ್ವ್ ಮಾಡುವುದಾಗಿ ಮೆನು ಕಾರ್ಡ್​​ನಲ್ಲಿ ಹೇಳಿದ್ದಾರೆ.

 

Be the first to comment

Leave a Reply

Your email address will not be published. Required fields are marked *

ad image