‘ಟಾಕ್ಸಿಕ್’ ಜಾಗಕ್ಕೆ ‘ಲವ್ ಮಾಕ್‌ಟೇಲ್ 3’ ಎಂಟ್ರಿ; ಯುಗಾದಿ ರಜೆಗಳ ಮೇಲೆ ಕಣ್ಣಿಟ್ಟ ʻಡಾರ್ಲಿಂಗ್ʼ ಕೃಷ್ಣ!

ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಜೂನ್ 4ಕ್ಕೆ ಮುಂದೂಡಲ್ಪಟ್ಟ ಕಾರಣ, ಮಾರ್ಚ್ 19ರ ಯುಗಾದಿ ರಜೆಯ ಲಾಭ ಪಡೆಯಲು ಡಾರ್ಲಿಂಗ್ ಕೃಷ್ಣ ಸಜ್ಜಾಗಿದ್ದಾರೆ. ‘ಲವ್ ಮಾಕ್‌ಟೇಲ್ 3’ ಚಿತ್ರವನ್ನು ಅದೇ ದಿನಾಂಕದಂದು ಬಿಡುಗಡೆ ಮಾಡಲು ವಿತರಣಾ ಜವಾಬ್ದಾರಿ ಹೊತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಮುಂದಾಗಿದೆ.

ಕೆ. ವೆಂಕಟ್‌ ನಾರಾಯಣ್‌ ಅವರ ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಾಣದ, ಯಶ್‌ ನಟನೆಯ ʻಟಾಕ್ಸಿಕ್ʼ‌ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗಿದೆ. ಮಾ.19ರಂದು ರಿಲೀಸ್‌ ಆಗಬೇಕಿದ್ದ ಸಿನಿಮಾವು ಈಗ ಜೂನ್‌ 4ರಂದು ರಿಲೀಸ್‌ ಅಗಲಿದೆ. ಸದ್ಯ ಸಿಕ್ಕಿರುವ ಮಾಹಿತಿ ಏನಪ್ಪ ಅಂದರೆ, ಮಾ.19ರ ಡೇಟ್‌ ಅನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ಕೈಬಿಟ್ಟಿಲ್ಲ. ಬದಲಿಗೆ, ಆ ಜಾಗಕ್ಕೆ ಮತ್ತೊಂದು ಸಿನಿಮಾವನ್ನು ಫಿಕ್ಸ್‌ ಮಾಡಿದೆ.

ಮಾ.19 ನಿರ್ಮಾಪಕರ ಪಾಲಿಗೆ ಲಕ್ಕಿ!

ಹೌದು, ಈ ವರ್ಷದ ಮಾರ್ಚ್‌ 19, ನಿರ್ಮಾಪಕರ ಪಾಲಿಗೆ ಲಕ್ಕಿ ಎಂದೇ ಹೇಳಬಹುದು. ಯಾಕೆಂದರೆ, ಅಂದು ಯುಗಾದಿ ಹಬ್ಬದ ರಜೆ ಇದೆ. ನಂತರ ರಂಜಾನ್‌ ರಜೆ (ಮಾ.21) ಜೊತೆಗೆ ಲಾಂಗ್‌ ವೀಕೆಂಡ್‌ ಸಿಗಲಿದೆ. ಯುಗಾದಿ, ಗುಡಿ ಪಾಡ್ವಾ ಮತ್ತು ರಂಜಾನ್‌ ಹಬ್ಬಗಳು ಒಟ್ಟಿಗೆ ಬರುವುದರಿಂದ, ಸಿನಿಮಾ ಬಿಡುಗಡೆಗೆ ಇದು ಒಳ್ಳೆಯ ದಿನಾಂಕವಾಗಿತ್ತು. ಇದೇ ಕಾರಣಕ್ಕೆ ಟಾಕ್ಸಿಕ್‌ ಚಿತ್ರವನ್ನು ಆ ದಿನದಂದೇ ರಿಲೀಸ್‌ ಮಾಡಲು ಪ್ಲ್ಯಾನ್‌ ಮಾಡಲಾಗಿತ್ತು. ಆದರೆ ಈಗ ಟಾಕ್ಸಿಕ್‌ ಮುಂದಕ್ಕೆ ಹೋಗಿರುವುದಿರಂದ, ಆ ದಿನಾಂಕ ಖಾಲಿ ಇದೆ.

ಹಾಗಂತ, ಅದು ವೇಸ್ಟ್‌ ಆಗೋದಿಲ್ಲ. ಬದಲಿಗೆ, ಆ ಜಾಗಕ್ಕೆ ಕನ್ನಡದ ಮತ್ತೊಂದು ಸಿನಿಮಾ ʻಲವ್‌ ಮಾಕ್‌ಟೇಲ್‌ 3ʼ ಬರಲಿದೆ. ಡಾರ್ಲಿಂಗ್‌ ಕೃಷ್ಣ ನಟಿಸಿ, ನಿರ್ಮಿಸಿ, ನಿರ್ದೇಶನ ಮಾಡಿರುವ ʻಲವ್‌ ಮಾಕ್‌ಟೇಲ್‌ 3ʼ ಸಿನಿಮಾವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ವಿತರಣೆ ಮಾಡುತ್ತಿದೆ. ಇದೀಗ ಟಾಕ್ಸಿಕ್‌ ಬದಲಿಗೆ, ಆ ಜಾಗಕ್ಕೆ ʻಲವ್‌ ಮಾಕ್‌ಟೇಲ್‌ 3ʼ ಚಿತ್ರವನ್ನು ರಿಲೀಸ್‌ ಮಾಡಲು ಮುಂದಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ. ಈ ಹಿಂದೆ ಏಪ್ರಿಲ್‌ 10ರಂದು ಲವ್‌ ಮಾಕ್‌ಟೇಲ್‌ 3 ರಿಲೀಸ್‌ ಅಗಲಿದೆ ಎಂದು ಘೋಷಣೆ ಆಗಿತ್ತು. ಇದೀಗ ಟಾಕ್ಸಿಕ್‌ ಪೋಸ್ಟ್‌ಪೋನ್‌ ಆಗಿದ್ದರಿಂದ, ಲವ್‌ ಮಾಕ್‌ಟೇಲ್‌ 3 ಪ್ರೀಪೋನ್‌ ಆಗುತ್ತಿದೆ.

ಅಂದು ರಣವೀರ್‌ ಸಿಂಗ್‌ ಅವರ ʻಧುರಂಧರ್‌ 2ʼ ಸಿನಿಮಾ ರಿಲೀಸ್‌ ಆಗುತ್ತಿದ್ದರೂ, ಅದರಿಂದ ʻಲವ್‌ ಮಾಕ್‌ಟೇಲ್‌ 3ʼ ಚಿತ್ರಕ್ಕೆ ಎಫೆಕ್ಟ್‌ ಏನೂ ಆಗೋದಿಲ್ಲ. ಯಾಕೆಂದರೆ, ಇದು ಕನ್ನಡ ಆಡಿಯೆನ್ಸ್‌ಗೆಂದೇ ಮಾಡಿರುವ ಸಿನಿಮಾ. ಇದರ ಮಾರುಕಟ್ಟೆಯೇ ಬೇರೆ ಇದೆ.

ಪಾರ್ಟ್‌ 3 ಮೂಲಕ ಮತ್ತೊಮ್ಮೆ ಬಂದ ಡಾರ್ಲಿಂಗ್‌ ಕೃಷ್ಣ

2020ರಲ್ಲಿ ಲವ್‌ ಮಾಕ್‌ಟೇಲ್‌ ಸಿನಿಮಾ ಮೂಲಕ ನಟರಾಗಿ ಮತ್ತು ನಿರ್ದೇಶಕರಾಗಿ ಗೆದ್ದಿದ್ದ ಡಾರ್ಲಿಂಗ್‌ ಕೃಷ್ಣ, ಆನಂತರ ಅದರ ಮುಂದುವರಿದ ಭಾಗ ಲವ್‌ ಮಾಕ್‌ಟೇಲ್‌ 2 ಮಾಡಿದ್ದರು. ಇದೀಗ ಸದ್ದಿಲ್ಲದೇ ಲವ್‌ ಮಾಕ್‌ಟೇಲ್‌ 3 ಸಿನಿಮಾವನ್ನು ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ನಿರ್ಮಾಣವನ್ನು ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಜಂಟಿಯಾಗಿ ಮಾಡಿದ್ದು, ಕಥೆ-ಚಿತ್ರಕಥೆ-ಸಂಭಾಷಣೆಯನ್ನು ಈ ಜೋಡಿಯೇ ಬರೆದಿದೆ. ನಕುಲ್‌ ಅಭ್ಯಂಕರ್‌ ಇದರ ಸಂಗೀತ ನಿರ್ದೇಶಕರು.

Be the first to comment

Leave a Reply

Your email address will not be published. Required fields are marked *

ad image