ಜ್ಯೋತಿಷಿ ಮಾತು ಕೇಳಿ 40 ಲಕ್ಷ ಹಣ, ಆಸ್ತಿಗಾಗಿ ತಾಯಿಯನ್ನೇ ಕೊಂದ ಮಗಳು!

ತುಮಕೂರು: ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆತ್ತ ತಾಯಿಯನ್ನೇ ಮಗಳೇ ಹತ್ಯೆ ಮಾಡಿದ ಕೇಸ್​​​ಗೆ ಟ್ವಿಸ್ಟ್ ಸಿಕ್ಕಿದೆ.  ಜ್ಯೋತಿಷಿಯ ಮಾತು‌ ನಂಬಿ ಹೆತ್ತ ತಾಯಿಯನ್ನೇ ಮಗಳು ಹತ್ಯೆ ಮಾಡಿದ್ದಾಳೆ ಎಂದು ಪ್ರಾರಂಭದಲ್ಲಿ ಹೇಳಲಾಗಿತ್ತು. ಆರೋಪಿ ಮಗಳು ಕೂಡ ಆನ್ ಲೈನ್ ಜ್ಯೋತಿಷಿಯ ಮಾತು ಕೇಳಿ ತಾಯಿಯನ್ನು ಹತ್ಯೆ ಮಾಡಿದ್ದೇನೆ ಎಂದು ಪೊಲೀಸರಿಗೆ ಹೇಳಿದ್ದಳು. ಆದರೇ, ತಾಯಿಯ ಹತ್ಯೆಯ ಹಿಂದೆ ಜ್ಯೋತಿಷಿಯ ಮಾತು ಇಲ್ಲ. ಆಸ್ತಿ ಮತ್ತು ಹಣಕ್ಕಾಗಿ ಮಗಳು ಸುಚಿತ್ರ ತನ್ನ ಹೆತ್ತ ತಾಯಿ ಪುಷ್ಪಾವತಿ ಅವರನ್ನೇ ಹತ್ಯೆ ಮಾಡಿದ್ದಾಳೆ ಎಂಬುವುದು ಈಗ ತನಿಖೆ ವೇಳೆ ಬೆಳಕಿಗೆ ಬಂದಿದೆ.

40 ಲಕ್ಷ ಹಣ, ಆಸ್ತಿಗಾಗಿ ತಾಯಿಯನ್ನೇ ಕೊಂದ ಮಗಳು!

ತಾಯಿ ಬಳಿ ಸೈಟ್ ಮಾರಿದ್ದ 40 ಲಕ್ಷ ರೂಪಾಯಿ ಹಣ ಹಾಗೂ ಮನೆ ಇತ್ತು. ಈ ಹಣವನ್ನು ತನಗೆ ನೀಡುವಂತೆ ಮಗಳು ಸುಚಿತ್ರ ತಾಯಿಯನ್ನು ಕೇಳಿದ್ದಾಳೆ. ಆದರೇ, ತಾಯಿ ಪುಷ್ಪಾವತಿ ಆ ಹಣವನ್ನು ಮಗಳಿಗೆ ನೀಡಿಲ್ಲ.  ಮದುವೆಯಾದ ಬಳಿಕ ಮಗಳು ಸುಚಿತ್ರಾ,  ತಾಯಿ ಪುಷ್ಪಾವತಿ ಮನೆಯಲ್ಲೇ ವಾಸ ಇದ್ದಳು. ತುಮಕೂರಿನ  ಸಿದ್ದಗಂಗಾ ಮಠದ ಬಳಿಯ ಶ್ರೀನಗರದಲ್ಲಿ  ಪುಷ್ಪಾವತಿ ವಾಸ ಇದ್ದರು. ಈ ಮನೆಯಲ್ಲೇ ಮಗಳು ಸುಚಿತ್ರಾ ಕೂಡ ವಾಸ ಇದ್ದಳು. ಪುಷ್ಪವತಿಯ ಪತಿ ಆಟೋ ಚಾಲಕರಾಗಿದ್ದರು. ಪುಷ್ಪಾವತಿ ಪತಿ ಈ ಹಿಂದೆಯೇ ಎರಡು ಸೈಟ್ ಖರೀದಿಸಿದ್ದರು. ಎರಡರ ಪೈಕಿ ಒಂದು ಸೈಟ್ ನಲ್ಲಿ ಮನೆ ಕಟ್ಟಿ , ಮತ್ತೊಂದು ಸೈಟ್ ಅನ್ನು ಮಾರಾಟ ಮಾಡಿದ್ದರು. ಸೈಟ್ ಮಾರಾಟದಿಂದ ಬಂದ 40 ಲಕ್ಷ ರೂಪಾಯಿ ಹಣವನ್ನು ಪುಷ್ಪಾವತಿ ಹೆಸರಿನಲ್ಲಿ ಬ್ಯಾಂಕ್ ಖಾತೆಯಲ್ಲಿ ಪತಿ ಹಣ ಇಟ್ಟಿದ್ದರು.  ಆದರೇ, ಇತ್ತೀಚೆಗೆ ಪುಷ್ಪಾವತಿ ಪತಿ ತೀರಿಕೊಂಡಿದ್ದರು.

ತಾಯಿ ಪುಷ್ಪಾವತಿ ಬ್ಯಾಂಕ್ ಖಾತೆಯಲ್ಲಿದ್ದ 40 ಲಕ್ಷ ರೂಪಾಯಿ ಹಣಕ್ಕಾಗಿ ಮಗಳು ನಿತ್ಯ ತನ್ನ ತಾಯಿಗೆ ಕಿರುಕುಳ ನೀಡುತ್ತಿದ್ದಳಂತೆ. ಸುಚಿತ್ರಾ ಕಿರುಕುಳದ ಬಗ್ಗೆ ತಾಯಿ ಪುಷ್ಪಾವತಿ ತನ್ನ ತಮ್ಮನ ಜೊತೆ ಹೇಳಿಕೊಂಡಿದ್ದಳು. ಮೊನ್ನೆ ರಾತ್ರಿ ತಾಯಿ ಪುಷ್ಪಾವತಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ದೊಡ್ಡಪ್ಪನಿಗೆ ಮಗಳು ಸುಚಿತ್ರಾ ಪೋನ್ ಕಾಲ್ ಮಾಡಿದ್ದಳು. ಅನುಮಾನ  ಬಂದಿದ್ದರಿಂದ ದೊಡ್ಡಪ್ಪ , ಹತ್ತಿರದ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ಮುಂದೆ ಆನ್ ಲೈನ್ ಜ್ಯೋತಿಷಿಯ ಮಾತು ನಂಬಿ ತಾಯಿಯನ್ನು ಹತ್ಯೆ ಮಾಡಿದ್ದಾಗಿ ಸುಚಿತ್ರಾ ಹೇಳಿದ್ದಳು. ತಂದೆಯ ಸಾವಿಗೆ ತಾಯಿ ಕಾರಣ. ಹೀಗಾಗಿ ತಾಯಿ ಹತ್ಯೆ ಮಾಡುವಂತೆ ಆನ್ ಲೈನ್ ಜ್ಯೋತಿಷಿ ಹೇಳಿದ್ದರು ಎಂದು ಸುಚಿತ್ರಾ ಸುಳ್ಳು ಕಥೆ ಕಟ್ಟಿದ್ದಳು. ಆದರೇ, ವಾಸ್ತವವಾಗಿ 40 ಲಕ್ಷ ರೂಪಾಯಿ ಹಣ ಹಾಗೂ ಆಸ್ತಿ ಲಪಟಾಯಿಸಲು ಮಗಳು ಸುಚಿತ್ರಾ ತನ್ನ ಹೆತ್ತ ತಾಯಿಯನ್ನೇ ಕೊಂದಿದ್ದಾಳೆ ಎಂಬುದು ಈಗ ಬೆಳಕಿಗೆ ಬಂದಿದೆ. ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪೊಲೀಸರು ಸುಚಿತ್ರಾಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Tags :

Tumakur

Be the first to comment

Leave a Reply

Your email address will not be published. Required fields are marked *

ad image