
ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ಸ್ಥಳಗಳಲ್ಲಿ ಒಂದಾದ ರೇಸ್ ಕೋರ್ಸ್ ಅಥವಾ ಟರ್ಫ್ ಕ್ಲಬ್ ಇನ್ಮುಂದೆ ಆ ಸ್ಥಳದಲ್ಲಿ ಇರೋದಿಲ್ಲ. ಯಾಕೆಂದ್ರೆ ರೇಸ್ ಕೋರ್ಸ್ ಸದ್ಯ ಆ ಸ್ಥಳದಿಂದ ಬೇರೆಡೆಗೆ ಸ್ಥಳಾಂತರವಾಗಲಿದೆ. ಹೌದು, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಬೆಂಗಳೂರಿನಿಂದ ತುಮಕೂರಿಗೆ ರೇಸ್ ಕೋರ್ಸ್ ಶಿಫ್ಟ್ ಮಾಡಲು ನಿರ್ಧರಿಸಿದ್ದಾಗಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ. ತುಮಕೂರಿಗೆ ಶಿಫ್ಟ್ ಮಾಡಲು 2 ವರ್ಷ ಕಾಲಾವಕಾಶ ನೀಡಲಾಗಿದ್ದು, 29 ವರ್ಷಕ್ಕೆ ಜಾಗ ಲೀಸ್ ನೀಡಲು ನಿರ್ಧಾರ ಮಾಡಲಾಗಿದೆ.

ಬೆಂಗಳೂರು ಟರ್ಫ್ ಕ್ಲಬ್‌ನವರಿಗೆ ಕುಣಿಗಲ್ ಸ್ಟಡ್ ಫಾರಂನ 101.24 ಎಕರೆ ಹಾಗೂ ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ 8.36 ಎಕರೆ ಜಮೀನು ಸೇರಿ 110.20 ಎಕರೆಯನ್ನು ಮಾರ್ಗಸೂಚಿ ದರದ ಶೇ.2.5 ರಷ್ಟು ವಾರ್ಷಿಕ ಬಾಡಿಗೆ ಆಧಾರದ ಮೇಲೆ 29 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲು ತೀರ್ಮಾನಿಸಲಾಗಿದೆ. ಎರಡು ವರ್ಷದೊಳಗೆ ಕುಣಿಗಲ್‌ಗೆ ಸ್ಥಳಾಂತರಿಸಲು ಟರ್ಫ್ ಕ್ಲಬ್ ಮಂಡಳಿ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ. 1923ರ ಸೆ.9 ರಂದು ಬೆಂಗಳೂರಿನ ಕೇಂದ್ರ ಭಾಗದಲ್ಲಿ ಮೈಸೂರಿನ ರಾಜರು 83.14 ಎಕರೆ ಜಾಗವನ್ನು ಕುದುರೆ ಓಟದ ಸ್ಪರ್ಧೆ ಹಾಗೂ ತರಬೇತಿಗೆ ನೀಡಿದ್ದರು. ಬಳಿಕ ಅದು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬಂದಿತ್ತು. ಇದೀಗ ಟರ್ಫ್ ಕ್ಲಬ್ ಸ್ಥಳಾಂತರದ ಬಳಿಕ ಈ ಜಾಗವನ್ನು ಹಸಿರು ಪ್ರದೇಶವಾಗಿ ಅಭಿವೃದ್ಧಿಪಡಿಸಲಾಗುವುದು
ಹೆಚ್ಚುವರಿ ಬಾಡಿಗೆ ಸಂಗ್ರಹಕ್ಕೆ ನಿರ್ಧಾರ
ಬೆಂಗಳೂರು ಟರ್ಫ್ ಕ್ಲಬ್‌ಗೆ ನೀಡಿದ್ದ 83.14 ಎಕರೆ ಜಮೀನಿಗೆ 2010ರ ಜ.1 ರಿಂದ ಬಾಡಿಗೆ ದರ ಪರಿಷ್ಕರಣೆ ಆಗಿರಲಿಲ್ಲ. ಈ ಬಗ್ಗೆ ಆಡಿಟ್ ಆಕ್ಷೇಪಣೆ ವ್ಯಕ್ತವಾಗಿದೆ. ಹೀಗಾಗಿ 2010 ರಿಂದ ಅನ್ವಯವಾಗುವಂತೆ ಆಯಾ ಸಾಲಿನ ಆದಾಯದ ಶೇ.2 ರಷ್ಟು ಮೊತ್ತವನ್ನು ಬಾಡಿಗೆ ದರವಾಗಿ ವಸೂಲಿ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. 2009ರವರೆಗೆ ವಾರ್ಷಿಕ 25.94 ಲಕ್ಷ ರು. ಮಾತ್ರ ಪಾವತಿಸಿತ್ತು. ಬಳಿಕ ಪರಿಷ್ಕರಣೆ ಆಗದೆ ಅಷ್ಟೇ ಮೊತ್ತ ಪಾವತಿಸುತ್ತಿದ್ದು ಲೋಕೋಪಯೋಗಿ ಇಲಾಖೆ ಹಾಗೂ ಸರ್ಕಾರಕ್ಕೆ ನಷ್ಟ ಉಂಟಾಗಿದೆ. 2010ರಿಂದ 2021ರವರೆಗೆ ವಾರ್ಷಿಕ ಆದಾಯದ ಶೇ.2 ರಷ್ಟು ಎಂದರೂ ವಾರ್ಷಿಕ 39.45 ಕೋಟಿ ರು. ಪಾವತಿ ಮಾಡಬೇಕಾಗಿತ್ತು. ಹೀಗಾಗಿ ಆದಾಯದ ಆಧಾರದ ಮೇಲೆ ಲೆಕ್ಕಾಚಾರ ಮಾಡಿ ಶೇ.2 ರಷ್ಟು ಬಾಡಿಗೆ ದರ ಸಂಗ್ರಹಿಸಲು ಸಚಿವ ಸಂಪುಟ ನಿರ್ಧಾರ ಮಾಡಿದೆ.
ಸ್ಥಳಾಂತರ ಯಾಕೆ?
ಬೆಂಗಳೂರು ಟರ್ಫ್ ಕ್ಲಬ್ ಬೆಂಗಳೂರು ಕೇಂದ್ರ ಭಾಗದಲ್ಲಿರುವುದರಿಂದ ಸಂಚಾರದಟ್ಟಣೆಗೆ ಕಾರಣವಾಗಲಿದೆ. ಕುಣಿಗಲ್‌ನಲ್ಲಿ 1992 ರಿಂದ ಈಗಾಗಲೇ ಕುಣಿಗಲ್ ಸ್ಟಡ್ ಹೆಸರಿನಲ್ಲಿ ಖಾಸಗಿ ಸಂಸ್ಥೆಯು ರೇಸ್‌ಕೋರ್ಸ್ ನಡೆಸುತ್ತಿದ್ದು ಎಲ್ಲಾ ಮೂಲಸೌಕರ್ಯಗಳೂ ಇವೆ. ಜತೆಗೆ ಸಂಚಾರದಟ್ಟಣೆ ಸಮಸ್ಯೆ ಇರುವುದಿಲ್ಲ. ಹೀಗಾಗಿ ಸ್ಥಳಾಂತರ ಮಾಡಬೇಕು ಎಂಬುದು ಸರ್ಕಾರದ ಅಭಿಮತ.






Be the first to comment
Leave a Reply