ಬೆಂಗಳೂರು, ಮಾ.4- ನಗರದ ವಾಹನ ದಟ್ಟಣೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಭಾವಿಸಲಾಗಿರುವ ಟನಲ್ ರಸ್ತೆ ನಿರ್ಮಾಣಕ್ಕೆ ಅಂತೂ ಇಂತೂ ಗ್ರೀನ್ ಸಿಗ್ನಲ್ ಸಿಕ್ಕಿದೆ.ಬಹುಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಟನಲ್ ರಸ್ತೆ ನಿರ್ಮಾಣದ ಹೊಣೆಯನ್ನು ಅದಾನಿ ಗ್ರೂಪ್ ಸಂಸ್ಥೆ ವಹಿಸಿಕೊಂಡಿದೆ ಎಂದು ಬಿ.ಸೈಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕನಸಿನ ಯೋಜನೆ ಎಂದೇ ಗುರುತಿಸಿಕೊಂಡಿರುವ ಈ ಟನಲ್ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಟೆಕ್ನಿಕಲ್ ಬಿಡ್ ಪರಿಶೀಲನೆ ಈಗಾಗಲೇ ಅಂತಿಮ ಹಂತದಲ್ಲಿ ಮುಕ್ತಾಯಗೊಂಡಿದೆ. ಮುಂದಿನ 15 ದಿನಗಳಲ್ಲಿ ಕಾಮಗಾರಿ ಆರಂಭಕ್ಕೆ ಅಂತಿಮ ಮುದ್ರೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
16.75 ಕಿಮೀ ಉದ್ದದ ಟನಲ್ ರಸ್ತೆ ಕಾಮಗಾರಿಯನ್ನು ಎರಡು ಪ್ಯಾಕೇಜ್‌ಗಳಲ್ಲಿ ಒಟ್ಟು 17,698 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಸರ್ಕಾರ ಟೆಂಡರ್ ಕರೆದಿತ್ತು.ಟೆಂಡರ್ ನಲ್ಲಿ ನಾಲ್ಕು ಕಂಪನಿಗಳು ಭಾಗವಹಿಸಿದವು.ಅದರೆ ದಿಲೀಪ್ ಬಿಲ್ಡ್ ಕಾನ್ ಹಾಗೂ ರೈಲ್ವೆ ವಿಕಾಸ್ ನಿಗಮ್ ಲಿಮಿಟೆಡ್ ಕಂಪನಿಗಳು ತಾಂತ್ರಿಕ ಕಾರಣಗಳಿಂದ ಅರ್ಹತೆ ಕಳೆದುಕೊಂಡವು.ಅಂತಿಮ ಹಣಕಾಸು ಹಂತಕ್ಕೆ ಅದಾನಿ ಸಂಸ್ಥೆ ಮತ್ತು ಹೈದರಾಬಾದ್ ಮೂಲದ ವಿಶ್ವ ಸಮುದ್ರ ಕಂಪನಿಗಳು ಮಾತ್ರ ಅಂತಿಮ ಬಿಡ್ ಪ್ರವೇಶಿಸಿವೆ.
ಸರ್ಕಾರದ ಅಂದಾಜು ವೆಚ್ಚ 17,698 ಕೋಟಿ ರೂ. ಆದರೆ ಅದಾನಿ ಗ್ರೂಪ್ 22,267 ಕೋಟಿ (ಅಂದಾಜಿಗಿಂತ 4,569 ಕೋಟಿ ಹೆಚ್ಚು ಶೇ.24ರಷ್ಟು ಹೆಚ್ಚಳ) ಬಿಡ್ ಮಾಡಿದೆ. ವಿಶ್ವಸಮುದ್ರ ಗ್ರೂಪ್ 25,474 ಕೋಟಿ (ಅಂದಾಜಿಗಿಂತ 7,776 ಕೋಟಿ ಹೆಚ್ಚು) ಬಿಡ್ ಮಾಡಿವೆ. ಎರಡೂ ಕಂಪನಿಗಳಲ್ಲಿ ಕಡಿಮೆ ಮೊತ್ತಕ್ಕೆ ಬಿಡ್ ಮಾಡಿರುವುದರಿಂದ ಅದಾನಿ ಗ್ರೂಪ್‌ಗೇ ಟೆಂಡರ್ ಒಲಿಯುವ ಸಾಧ್ಯತೆ ಹೆಚ್ಚು ಎಂದು ಮೂಲಗಳು ತಿಳಿಸಿವೆ.
ಅದಾನಿ ಕುರಿತಾಗಿ ಆಗಾಗ ಟೀಕೆ ಮಾಡುತ್ತಿದ್ದ ಕಾಂಗ್ರೆಸ್ ಸರ್ಕಾರವೇ ಈಗ ಅದೇ ಅದಾನಿ ಗ್ರೂಪ್‌ಗೆ ಟೆಂಡರ್ ನೀಡಲಿದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.ಮತ್ತೊಂದೆಡೆ, ಟನಲ್ ರಸ್ತೆ ಯೋಜನೆಯನ್ನು ವಿರೋಧಿಸುತ್ತಿದ್ದ ಬಿಜೆಪಿ, ಇದೀಗ ಅದಾನಿ ವಿರುದ್ಧ ಧ್ವನಿ ಎತ್ತುತ್ತದೆಯೇ ಎಂಬುದೂ ಕುತೂಹಲ ಹುಟ್ಟಿಸಿದೆ.
ಕಳೆದ ಎರಡು ತಿಂಗಳಿಂದ ತಾಂತ್ರಿಕ ಅಡಚಣೆಗಳನ್ನು ಬಗೆಹರಿಸಲಾಗಿದ್ದು, ಹಣಕಾಸು ಪರಿಶೀಲನೆ ಪೂರ್ಣಗೊಂಡ ಬಳಿಕ ಮುಂದಿನ 15 ದಿನಗಳಲ್ಲಿ ಅಂತಿಮ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆ ಇದೆ. ಟ್ರಾಫಿಕ್ ಸಮಸ್ಯೆಗೆ ಪರಿಹಾರ ಎನ್ನಲಾಗುತ್ತಿರುವ ಟನಲ್ ರಸ್ತೆ ಯೋಜನೆ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ದೊಡ್ಡ ಚರ್ಚೆಗೆ ಕಾರಣವಾಗುತ್ತಿದೆ.






Be the first to comment
Leave a Reply