
ರಾವಲ್ಪಿಂಡಿ: ಭ್ರಷ್ಟಾಚಾರದ ಆರೋಪದಡಿ ವರ್ಷಗಳಿಂದ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಗ್ಯವು ಗಂಭೀರವಾಗಿ ಹದಗೆಟ್ಟಿದೆ ಎಂಬ ಮಾಹಿತಿ ಹೊರಬಂದಿದ್ದು, ಪಾಕ್ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅದರಂತೆ, ಕಳೆದ ಎರಡೂವರೆ ವರ್ಷದಿಂದ ಅಡಿಯಾಲ ಜೈಲಿನಲ್ಲಿರುವ ಇಮ್ರಾನ್ ಖಾನ್ ಗಂಭೀರವಾದ ದೃಷ್ಟಿ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ ಎನ್ನಲಾಗಿದೆ.
73 ವರ್ಷದ ಇಮ್ರಾನ್ ಖಾನ್ ಪ್ರಸ್ತುತ ರಾವಲ್ಪಿಂಡಿಯಲ್ಲಿ ಇರುವ ಅಡಿಯಾಲ ಜೈಲಿನಲ್ಲಿ ಬಂಧನದಲ್ಲಿದ್ದಾರೆ. ಅವರ ಆರೋಗ್ಯ ಕಳೆದ ಕೆಲವು ತಿಂಗಳುಗಳಿಂದ ಚಿಂತಾಜನಕವಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಇಮ್ರಾನ್ ಸಹೋದರಿ ಅಲೀಮಾ ಖಾನ್, “ತಮ್ಮ ಸಹೋದರನ ಬಲಗಣ್ಣಿನ ದೃಷ್ಟಿ ಸಾಮರ್ಥ್ಯವು ಬಹಳಷ್ಟು ಕುಗ್ಗಿದ್ದು, ಈಗ ಕೇವಲ 15 ಶೇಕಡಾ ಮಾತ್ರ ನೋಡಲು ಸಾಧ್ಯವಾಗುತ್ತಿದೆ” ಎಂದ ಅವರು, ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಇನ್ನು, ವೈದ್ಯಕೀಯ ವರದಿಗಳ ಪ್ರಕಾರ, ಇಮ್ರಾನ್ ಖಾನ್ ಅವರ ಬಲಗಣ್ಣಿನಲ್ಲಿ ಸೆಂಟ್ರಲ್ ರೆಟಿನಲ್ ವೇನ್ ಅಕ್ಲೂಷನ್ ಎಂಬ ಗಂಭೀರ ಕಣ್ಣಿನ ಸಮಸ್ಯೆ ಕಂಡುಬಂದಿದೆ. ಈ ಕಾಯಿಲೆಯಲ್ಲಿ ಕಣ್ಣಿನ ರಕ್ತನಾಳಗಳಲ್ಲಿ ಅಡ್ಡಿಯಾಗುವ ಕಾರಣ ದೃಷ್ಟಿ ತೀವ್ರವಾಗಿ ಹದಗೆಡುತ್ತದೆ. ಜೊತೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಶಾಶ್ವತ ಕುರುಡುತನಕ್ಕೆ ಕಾರಣವಾಗಬಹುದು ಎನ್ನಲಾಗಿದೆ. ಹಾಗಾಗಿ, ಅವರಿಗೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಿದೆ.
3-4 ತಿಂಗಳಲ್ಲೇ ದೃಷ್ಟಿ ಕಳೆದುಕೊಂಡ ಪಾಕ್ ಮಾಜಿ ಪ್ರಧಾನಿ
ಮತ್ತೊಂದೆಡೆ, ಅಕ್ಟೋಬರ್ 2025ರವರೆಗೆ ಇಮ್ರಾನ್ ಖಾನ್ ಅವರ ದೃಷ್ಟಿ ಸಂಪೂರ್ಣವಾಗಿ (6/6 vision) ಸರಿಯಾಗಿತ್ತು. ಆದರೆ, ಕಳೆದ 3-4 ತಿಂಗಳಿಂದ ಅವರು ಮಂಜು ಮಂಜಾಗಿ ಕಾಣಿಸುವ ಸಮಸ್ಯೆಯ ಬಗ್ಗೆ ಜೈಲು ಅಧಿಕಾರಿಗಳಿಗೆ ಪದೇ ಪದೇ ದೂರು ನೀಡಿದ್ದರು. ಆದರೆ ಅಧಿಕಾರಿಗಳು ಕಣ್ಣಿನ ಡ್ರಾಪ್ಸ್ಗಳನ್ನು ಮಾತ್ರವೇ ನೀಡಿ, ಅವರ ದೂರನ್ನು ನಿರ್ಲಕ್ಷಿಸಿದ್ದರು ಎಂದು ಇಮ್ರಾನ್ ಪರ ವಕೀಲ ಸಲ್ಮಾನ್ ಸಫ್ದರ್ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.
ಏತನ್ಮಧ್ಯೆ, ಪಾಕಿಸ್ತಾನದ ಸುಪ್ರೀಂ ಕೋರ್ಟ್ ಇಮ್ರಾನ್ ಅವರ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಫೆಬ್ರವರಿ 16, 2026ರೊಳಗೆ ಇಮ್ರಾನ್ ಖಾನ್ ಅವರ ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಲು ತಜ್ಞ ವೈದ್ಯರ ಮಂಡಳಿಯನ್ನ ರಚಿಸಿ ವರದಿ ಸಲ್ಲಿಸುವಂತೆ ಆದೇಶಿಸಿದೆ.






Be the first to comment
Leave a Reply