
ತಮಿಳುನಾಡಿನ ಮಾಜಿ ಸಿಎಂ ಓ ಪನ್ನೀರ್ ಸೆಲ್ವಂ ಇಂದು ಅಧಿಕೃತವಾಗಿ ಡಿಎಂಕೆ ಪಕ್ಷವನ್ನು ಸೇರಿದ್ದಾರೆ. ಸಿಎಂ ಎಂ.ಕೆ.ಸ್ಟಾಲಿನ್ , ಸಚಿವ ಉದಯನಿಧಿ ಸ್ಟಾಲಿನ್ ಸಮ್ಮುಖದಲ್ಲಿ ಡಿಎಂಕೆ ಪಕ್ಷ ಸೇರಿದ್ದಾರೆ. ತಮಿಳುನಾಡಿನಲ್ಲಿ ಓ ಪನ್ನೀರ್ ಸೆಲ್ವಂ ಮಾಜಿ ಸಿಎಂ ಜಯಲಲಿತಾರ ಬಲಗೈ ಬಂಟ ಎಂದೇ ಖ್ಯಾತಿ ಪಡೆದವರು. ಕಾನೂನು ಸಂಕಷ್ಟ, ಕೋರ್ಟ್ ಕೇಸ್ ಕಾರಣದಿಂದ ಜೆ.ಜಯಲಲಿತಾ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಲೆಲ್ಲಾ ಓ.ಪನ್ನೀರ್ ಸೆಲ್ವಂರನ್ನು ಸಿಎಂ ಸ್ಥಾನದಲ್ಲಿ ಕೂರಿಸಿ ಆಳ್ವಿಕೆ ನಡೆಸುತ್ತಿದ್ದರು. ಪನ್ನೀರ್ ಸೆಲ್ವಂ ಬಿಳಿ ಬಣ್ಣದ ಶರ್ಟ್ ನಲ್ಲಿ ಯಾವಾಗಲೂ ಜೆ.ಜಯಲಲಿತಾ ಪೋಟೋ ಇರುತ್ತಿತ್ತು. ತಮಿಳುನಾಡಿನ ಜನರ ಪಾಲಿನ ಅಮ್ಮ ಜಯಲಲಿತಾ ಬಲಗೈ ಬಂಟನೇ ಇಂದು ಎದುರಾಳಿ ಪಕ್ಷ ಡಿಎಂಕೆ ಸೇರಿರುವುದು ವಿಶೇಷ.
ಪನ್ನೀರ್ ಸೆಲ್ವಂರನ್ನು ಎಐಎಡಿಎಂಕೆಯಿಂದ ಉಚ್ಚಾಟನೆ ಮಾಡಲಾಗಿತ್ತು. ಬೇಷರತ್ ಆಗಿ ಎಐಎಡಿಎಂಕೆ ಸೇರಲು ತಾವು ಸಿದ್ದ ಎಂದು ಪನ್ನೀರ್ ಸೆಲ್ವಂ ಹೇಳಿದ್ದರು. ಆದರೇ, ಪನ್ನೀರ್ ಸೆಲ್ವಂರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಎಐಎಡಿಎಂಕೆ ಪಕ್ಷದ ಎಡಪ್ಪಾಡಿ ಪಳನಿಸ್ವಾಮಿ ಸಿದ್ದವಿರಲಿಲ್ಲ. ಹೀಗಾಗಿ ಈಗ ಎದುರಾಳಿ ಪಕ್ಷ ಡಿಎಂಕೆ ಪಕ್ಷವನ್ನೇ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಇತ್ತೀಚೆಗೆ ಪನ್ನೀರ್ ಸೆಲ್ವಂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದ್ದರು. ಈ ಮೂಲಕ ಡಿಎಂಕೆ ಪಕ್ಷ ಒಲವು ತೋರಿದ್ದರು. ಪಕ್ಷಕ್ಕೆ ಸೇರ್ಪಡೆಯಿಂದ ತಮ್ಮ ಅಸೆಂಬ್ಲಿ ಕ್ಷೇತ್ರವಾದ ಬೋದಿನಾಯಕನೂರ್ ಕ್ಷೇತ್ರದಿಂದ ಡಿಎಂಕೆ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಅವಕಾಶ ಸಿಗುತ್ತೆ. ಈಗಾಗಲೇ ಎಐಎಡಿಎಂಕೆ ಪಕ್ಷದಿಂದ ಡಿಎಂಕೆ ಸೇರಿರುವ ಸೆಂತಿಲ್ ಬಾಲಾಜಿ , ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಇವಿ ವೇಲು, ಪಿಕೆ ಶೇಖರ್ ಬಾಬು, ಎಸ್.ರಘುಪತಿ ಈಗಾಗಲೇ ಎಐಎಡಿಎಂಕೆ ಪಕ್ಷದಿಂದ ಡಿಎಂಕೆ ಪಕ್ಷ ಸೇರಿದ್ದಾರೆ. ಇವರಿಗೆಲ್ಲಾ ಡಿಎಂಕೆ ಸರ್ಕಾರದಲ್ಲಿ ಒಳ್ಳೆಯ ಸ್ಥಾನಮಾನ ಸಿಕ್ಕಿದೆ. ಓಪಿಎಸ್ ಕೂಡ ತಮಗೂ ಅದೇ ರೀತಿ ಡಿಎಂಕೆ ಪಕ್ಷ, ಸರ್ಕಾರದಲ್ಲಿ ಒಳ್ಳೆಯ ಸ್ಥಾನಮಾನ ಸಿಗಬಹುದು ಎಂಬ ಭರವಸೆ, ನಿರೀಕ್ಷೆಯಲ್ಲೇ ಡಿಎಂಕೆ ಪಕ್ಷ ಸೇರಿದ್ದಾರೆ.
ಇನ್ನೂ ಡಿಎಂಕೆ ಪಕ್ಷವು ದಕ್ಷಿಣ ತಮಿಳುನಾಡಿನಲ್ಲಿ ಓ ಪನ್ನೀರ್ ಸೆಲ್ವಂರನ್ನು ಥೇವರ್ ಸಮುದಾಯದ ನಾಯಕನಾಗಿ ಬಿಂಬಿಸಲಿದೆ. ಓ.ಪನ್ನೀರ್ ಸೆಲ್ವಂ ಪುತ್ರ ಓ.ಪಿ.ರವೀಂದ್ರನಾಥ್ ಗೂ ಡಿಎಂಕೆ ಪಕ್ಷದಲ್ಲಿ ಪ್ರಮುಖ ಸ್ಥಾನಮಾನ, ಚುನಾವಣಾ ಟಿಕೆಟ್ ಸಿಕ್ಕು, ಸನ್ ಶೈನ್ ಆಗಬಹುದು ಎಂಬ ನಿರೀಕ್ಷೆಯಲ್ಲಿ ಓ.ಪನ್ನೀರ್ ಸೆಲ್ವಂ ಇದ್ದಾರೆ. ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಓ.ಪನ್ನೀರ್ ಸೆಲ್ವಂ ತಮ್ಮನ್ನು ಎಐಎಡಿಎಂಕೆ ಪಕ್ಷದಿಂದ ಹೊರ ಹಾಕಿದ ಎಡಪ್ಪಾಡಿ ಪಳನಿಸ್ವಾಮಿಯನ್ನು ಟೀಕಿಸುವುದರಲ್ಲೇ ಹೆಚ್ಚಿನ ಹೊತ್ತು ಕಳೆಯಬಹುದು. ಅದಕ್ಕೆ ಹೆಚ್ಚು ಒತ್ತು ಕೊಡಬಹುದು. ಇದು ಡಿಎಂಕೆಗೂ ಲಾಭ ತಂದುಕೊಡಬಹುದು ಎಂಬ ಲೆಕ್ಕಾಚಾರ ಇದೆ.
ಮತ್ತೊಂದೆಡೆ ತಮಿಳುನಾಡು ರಾಜಕೀಯದಲ್ಲಿ ವಿ.ಕೆ.ಶಶಿಕಲಾ ಕೂಡ ತಮ್ಮ ಎಂಟ್ರಿ ಕೊಡಲು ಸಿದ್ದವಾಗಿದ್ದಾರೆ. ಈ ಭಾರಿ ಹೊಸ ಪಕ್ಷ ಸ್ಥಾಪಿಸುತ್ತಿದ್ದಾರೆ. ಈಗಾಗಲೇ ಪಕ್ಷದ ಬಾವುಟ ಬಿಡುಗಡೆ ಮಾಡಿದ್ದಾರೆ. ಪಕ್ಷದ ಹೆಸರು ಘೋಷಣೆ ಮಾತ್ರ ಬಾಕಿ ಇದೆ. ಪನ್ನೀರ್ ಸೆಲ್ವಂ ವೈರಿ ಪಕ್ಷ ಡಿಎಂಕೆ ಸೇರಿರುವುದನ್ನು ವಿ.ಕೆ.ಶಶಿಕಲಾ ಟೀಕಿಸಿದ್ದಾರೆ. ಇದೊಂದು ಅವಕಾಶವಾದಿತನ ಎಂದು ವಿ.ಕೆ.ಶಶಿಕಲಾ ಟೀಕಿಸಿದ್ದಾರೆ.






Be the first to comment
Leave a Reply