ಬ್ಯಾಂಕ್ ಖಾತೆ ಡೀಟೈಲ್ಸ್ ಕೊಟ್ಟು ಯಾಮಾರಿದ ಸ್ನೇಹಿತ: 7 ಕೋಟಿ ರೂ. ಸೈಬರ್ ವಂಚನೆ ಪತ್ತೆ!

ಬ್ಯಾಂಕ್ ಖಾತೆ ಡೀಟೈಲ್ಸ್ ಕೊಟ್ಟು ಯಾಮಾರಿದ ಸ್ನೇಹಿತ: 7 ಕೋಟಿ ರೂ. ಸೈಬರ್ ವಂಚನೆ ಪತ್ತೆ!

ಬೆಂಗಳೂರು: ಯಾರಿಗೆ ಆಗಲಿ ನಮ್ಮ ಬ್ಯಾಂಕ್ ಅಕೌಂಟ್ ಡೀಟೈಲ್ಸ್ , ಪಾಸ್ ವರ್ಡ್, ಪಿನ್ ಸೇರಿದಂತೆ ಹಣಕಾಸಿನ ಗೌಪ್ಯ ಮಾಹಿತಿಗಳನ್ನು ನೀಡಬೇಡಿ ಎಂದು ಆರ್‌ಬಿಐ ಅಭಿಯಾನವನ್ನೇ ನಡೆಸುತ್ತಿದೆ. ಆದರೂ ಜನರು ತಮ್ಮ ಬ್ಯಾಂಕ್ ಖಾತೆ, ಪಾಸ್ ವರ್ಡ್, ಪಿನ್ ಸೇರಿದಂತೆ ಕೆಲ ಮಹತ್ವದ ಡೀಟೈಲ್ಸ್  ಅನ್ನು ಸ್ನೇಹಿತರು, ಸಂಬಂಧಿಗಳು ಅನ್ನೋ ಕಾರಣಕ್ಕಾಗಿ ಬೇರೆಯವರಿಗೆ ನೀಡಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಇದಕ್ಕೊಂದು ತಾಜಾ  ಉದಾಹರಣೆ, ಬೆಂಗಳೂರಿನಲ್ಲಿ ನಡೆದಿರುವ ಘಟನೆ.

ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಓದುತ್ತಿದ್ದ ವಿದ್ಯಾರ್ಥಿಗೆ  ಆಯುಷ್ ಎಂಬ ಸ್ನೇಹಿತನಿದ್ದಾನೆ. ಆಯುಷ್ ಒಂದೆರೆಡು ತಿಂಗಳ ಹಿಂದೆ ತನ್ನ ಸ್ನೇಹಿತನಿಗೆ ಪೋನ್ ಕಾಲ್ ಮಾಡಿದ್ದು, ತಾನು ಸಂಕಷ್ಟದಲ್ಲಿದ್ದೇನೆ. ತನ್ನ ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ. ಹೀಗಾಗಿ ಹಣ ವರ್ಗಾವಣೆ ಮಾಡಲು ನಿನ್ನ ಬ್ಯಾಂಕ್ ಖಾತೆಯ ಡೀಟೈಲ್ಸ್ ಬೇಕು, ಸ್ಪಲ್ಪ ದಿನ ಹಣ ವರ್ಗಾವಣೆ ಮಾಡಿ, ಹಣ ವಿತ್ ಡ್ರಾ ಮಾಡಿಕೊಳ್ಳುತ್ತೇನೆ ಎಂದಿದ್ದಾನೆ. ಇದನ್ನು ನಂಬಿದ ಬೆಂಗಳೂರಿನ ಸ್ನೇಹಿತ, ಆಯುಷ್  ಹೇಗಿದ್ದರೂ ನನ್ನ ಸ್ನೇಹಿತ.  ಬ್ಯಾಂಕ್ ಖಾತೆ ಡೀಟೈಲ್ಸ್ ಕೊಡುವುದರಿಂದ ಆತನಿಗೆ ಅನುಕೂಲವಾಗುತ್ತೆ. ಇದರಿಂದ ನಾನು ಕಳೆದುಕೊಳ್ಳುವುದು ಏನೂ ಇಲ್ಲ ಎಂದು ಯೋಚಿಸಿ , ತನ್ನ ಬ್ಯಾಂಕ್ ಖಾತೆಯ ಸಂಪೂರ್ಣ ವಿವರವನ್ನು ಆಯುಷ್‌ಗೆ ನೀಡಿದ್ದಾನೆ. ಬ್ಯಾಂಕ್ ಖಾತೆಯ ಸಂಖ್ಯೆ, ಪ್ಯಾನ್ ನಂಬರ್, ಪಾಸ್ ವರ್ಡ್, ಪಿನ್ ಸೇರಿದಂತೆ ಎಲ್ಲ ವಿವರಗಳನ್ನು ಆಯುಷ್ ಗೆ ನೀಡಿದ್ದಾನೆ. ತನ್ನ ಸ್ನೇಹಿತನನ್ನು ನಂಬಿ, ವಿದ್ಯಾರ್ಥಿಯು ತನ್ನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆಯ ಪ್ರವೇಶ ವಿವರಗಳನ್ನು ಹಂಚಿಕೊಂಡಿದ್ದಾನೆ, ಇದರಲ್ಲಿ ಎಟಿಎಂ-ಲಿಂಕ್ಡ್ ಏರ್‌ಟೆಲ್ ಸಿಮ್ ಕಾರ್ಡ್, ನೆಟ್ ಬ್ಯಾಂಕಿಂಗ್ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಸೇರಿವೆ ಎಂದು ವರದಿಯಾಗಿದೆ. ಈ ವಿವರಗಳನ್ನು ಪೋಸ್ಟ್ ಮೂಲಕ ಹಂಚಿಕೊಳ್ಳಲಾಗಿದೆ.

ಆದರೇ, ಈಗ ಅಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಸ್ನೇಹಿತನ ಬ್ಯಾಂಕ್ ಖಾತೆಯ ವಿವರ ಬಳಸಿಕೊಂಡು, 7 ಕೋಟಿ ರೂಪಾಯಿ ಮೊತ್ತದ ಸೈಬರ್ ವಂಚನೆ ನಡೆಸಲಾಗಿದೆ ಎಂಬುದು ಈಗ ಬೆಳಕಿಗೆ ಬಂದಿದೆ. ಆಯುಷ್‌ಗೆ ಬ್ಯಾಂಕ್ ಖಾತೆ ವಿವರ ನೀಡಿದ ಸ್ನೇಹಿತನಿಗೆ ತಾನು ಕಾನೂನಿನ ಸಂಕಷ್ಟಕ್ಕೆ ಸಿಲುಕುತ್ತೇನೆ ಎಂಬ ಅರಿವು, ಜ್ಞಾನವೇ ಇರಲಿಲ್ಲ.  ಆದರೇ, ಬ್ಯಾಂಕ್ ನಿಂದ ಕಾಲ್ ಮಾಡಿ, ನಿಮ್ಮ ಬ್ಯಾಂಕ್ ಖಾತೆಯಿಂದ 7 ಕೋಟಿ ರೂಪಾಯಿವರೆಗೂ ಹಣದ ವರ್ಗಾವಣೆ ನಡೆದಿದೆ ಎಂದು ಹೇಳಿದಾಗ, ಸ್ನೇಹಿತನಿಗೆ ಶಾಕ್  ಆಗಿದೆ.  ಆಯುಷ್ ನನ್ನು ನಂಬಿ ಬ್ಯಾಂಕ್ ಖಾತೆಯ ವಿವರ ನೀಡಿದ್ದರಿಂದ ಮೋಸ ಹೋದೆ ಎಂಬ ಅರಿವು ಆಗಿದೆ. ಸೈಬರ್ ವಂಚನೆಗೆ ತನ್ನ ಬ್ಯಾಂಕ್ ಖಾತೆಯನ್ನು ಬಳಸಿಕೊಳ್ಳಲಾಗಿದೆ ಎಂಬುದು ಈಗ ಗೊತ್ತಾಗಿದೆ. ಈಗ  ಇಂಜಿನಿಯರಿಂಗ್ ವಿದ್ಯಾರ್ಥಿಯ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. ತನ್ನ ಖಾತೆಯನ್ನು ಸೈಬರ್ ಅಪರಾಧ ಚಟುವಟಿಕೆಗಳಿಗಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅರಿತುಕೊಂಡ ವಿದ್ಯಾರ್ಥಿ ಪೊಲೀಸರನ್ನು ಸಂಪರ್ಕಿಸಿದ್ದಾನೆ. ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆಯುಷ್ ಹಾಗೂ ಇತರರ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ.

Be the first to comment

Leave a Reply

Your email address will not be published. Required fields are marked *

ad image