ಬೆಂಗಳೂರು,ಮಾ.5- ಇರಾನ್-ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷದಿಂದ ಚಿನ್ನ ಮತ್ತು ಬೆಳ್ಳಿ ದರಗಳು ದುಬಾರಿಯಾಗಲಿವೆ ಎಂಬ ಲೆಕ್ಕಾಚಾರದ ನಡುವೆಯೂ ನಿರಂತರವಾಗಿ ಇಳಿಮುಖವಾಗುತ್ತಿವೆ.

ಕಳೆದ ನಾಲ್ಕು ದಿನಗಳಿಂದ ಚಿನ್ನದ ದರದಲ್ಲಿ ಇಳಿಕೆಯಾಗಿದ್ದರೆ , ಬೆಳ್ಳಿ ಕಳೆದೆರಡು ದಿನಗಳಿಂದಲೂ ಇಳಿಕೆಯಾಗುತ್ತಿದೆ. ಇದು ಗ್ರಾಹಕರಿಗೆ ತುಸು ಸಮಾಧಾನ ತರುವ ಸಂಗತಿಯಾಗಿದೆ. ಆದರೆ ವರ್ತಕರ ಅಭಿಪ್ರಾಯದ ಪ್ರಕಾರ ಚಿನ್ನ-ಬೆಳ್ಳಿ ದರಗಳಲ್ಲಿ ಸದ್ಯಕ್ಕೆ ಏರಿಳಿತಗಳಾಗುತ್ತಿದ್ದರೂ ದೀರ್ಘಾವಧಿಯಲ್ಲಿ ಏರುಗತಿಯಲ್ಲೇ ಸಾಗುತ್ತವೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ ಮಾ.2ರಿಂದಲೂ ಚಿನ್ನದ ದರ ಇಳಿಮುಖವಾಗಿದೆ. 24 ಕ್ಯಾರೆಟ್ನ ಚಿನ್ನ ಪ್ರತಿ ಗ್ರಾಂಗೆ ಇಂದು 98 ರೂ. ಕಡಿಮೆಯಾಗಿದ್ದು, 16,353 ರೂ.ನಷ್ಟಿದೆ. ಕಳೆದ ನಾಲ್ಕು ದಿನಗಳಲ್ಲಿ ಒಟ್ಟು 956 ರೂ. ಕುಸಿತವಾಗಿದೆ. ಅದೇ ರೀತಿ 22 ಕ್ಯಾರೆಟ್ನ ಚಿನ್ನ 1 ಗ್ರಾಂಗೆ ಇಂದು 90 ರೂ. ಇಳಿಕೆಯಾಗಿದ್ದು, 14,990 ರೂ.ನಷ್ಟಿದೆ.
ಕಳೆದ ನಾಲ್ಕು ದಿನಗಳಲ್ಲಿ ಒಟ್ಟು 895 ರೂ.ನಷ್ಟು ಇಳಿಕೆಯಾಗಿದೆ. 18 ಕ್ಯಾರೆಟ್ನ 1 ಗ್ರಾಂಗೆ 73 ರೂ. ಕಡಿಮೆಯಾಗಿದ್ದು, 12,265 ರೂ.ಗೆ ಇಳಿಕೆಯಾಗಿದೆ. ಚಿನ್ನದಂತೆಯೇ ಬೆಳ್ಳಿ ಕೂಡ ಇಳಿಮುಖವಾಗಿದ್ದು, ಇಂದು ಸ್ಥಿರವಾಗಿದೆ. ಪ್ರತಿ ಕೆ.ಜಿ.ಗೆ 2,85,000 ರೂ.ನಷ್ಟಿದೆ.
ನಿನ್ನೆ 10 ಸಾವಿರ ರೂ. ಹಾಗೂ ಮಾ.3ರಂದು 20 ಸಾವಿರ ರೂ. ಇಳಿಕೆಯಾಗಿತ್ತು. ಮಾ.2ರಂದು 20 ಸಾವಿರ ರೂ.ನಷ್ಟು ಪ್ರತಿ ಕೆ.ಜಿ ಬೆಳ್ಳಿ ದರ ಹೆಚ್ಚಾಗಿದ್ದು, ಮತ್ತೆ ಏರುಗತಿಯಲ್ಲಿ ಸಾಗುವ ಸುಳಿವು ನೀಡಿತ್ತು.
ಆದರೆ ಪ್ಲಾಟಿನಂ ದರ ಏರಿಕೆಯಾಗಿದ್ದು, ಇಂದು ಪ್ರತಿ ಗ್ರಾಂಗೆ 89 ರೂ. ಹೆಚ್ಚಳವಾಗಿ 6,399 ರೂ.ನಷ್ಟಿದೆ. ದುಬಾರಿ ಲೋಹಗಳಾಗಿರುವುದರಿಂದ ಮಾರುಕಟ್ಟೆಯಲ್ಲಿ ಆಗಾಗ್ಗೆ ಏರಿಳಿತವಾದರೂ ಭಾರೀ ಪ್ರಮಾಣದಲ್ಲಿ ಕುಸಿತವಾಗುವುದಿಲ್ಲ ಎಂಬ ವಿಶ್ವಾಸದಿಂದ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯ ಮೇಲೆ ಹೆಚ್ಚೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಗ್ರಾಹಕರ ಕೈಗೆ ಎಟುಕದಷ್ಟು ದುಬಾರಿಯಾಗುತ್ತಿವೆ.






Be the first to comment
Leave a Reply