ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್.. ಪ್ರಯಾಣಿಕರು ಓದಲೇಬೇಕಾದ ಸ್ಟೋರಿ..

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್.. ಪ್ರಯಾಣಿಕರು ಓದಲೇಬೇಕಾದ ಸ್ಟೋರಿ..

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ನಮ್ಮ ಮೆಟ್ರೋ (Namma Metro) ಯೆಲ್ಲೋ ಲೈನ್ (ಹಳದಿ ಮಾರ್ಗ) ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಭರ್ಜರಿ ಸಿಹಿಸುದ್ದಿ ನೀಡಿದೆ. ಈ ಮಾರ್ಗದಲ್ಲಿ ಇವತ್ತಿನಿಂದ 8ನೇ ಮೆಟ್ರೋ ರೈಲು ಕಾರ್ಯಾಚರಣೆ ಆರಂಭಿಸಲಿದ್ದು, ಇದರಿಂದ ಪ್ರಯಾಣಿಕರ ಕಾಯುವಿಕೆ ಸಮಯ ಗಣನೀಯವಾಗಿ ತಗ್ಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕೃತ ಪ್ರಕಟಣೆ ಹೊರಡಿಸಿದೆ.

9 ನಿಮಿಷಕ್ಕೊಂದು ರೈಲು ಲಭ್ಯ!

ಸದ್ಯ ಹಳದಿ ಮಾರ್ಗದಲ್ಲಿ ಒಟ್ಟು 7 ರೈಲುಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ. ಇದರಿಂದಾಗಿ ಪೀಕ್ ಅವರ್‌ನಲ್ಲಿ (ದಟ್ಟಣೆ ಅವಧಿ) ಪ್ರತಿ 10 ನಿಮಿಷಕ್ಕೊಂದು ರೈಲು ಸಂಚರಿಸುತ್ತಿತ್ತು. ಇದೀಗ 8ನೇ ರೈಲು ಸೇರ್ಪಡೆಯಾಗುತ್ತಿರುವುದರಿಂದ ಪೀಕ್ ಅವರ್‌ನಲ್ಲಿ ರೈಲುಗಳ ಅಂತರ 9 ನಿಮಿಷಕ್ಕೆ ಇಳಿಕೆಯಾಗಲಿದೆ. ಅಂದರೆ, ಇನ್ಮುಂದೆ ಆಫೀಸ್‌ಗೆ ಹೋಗುವ ಮತ್ತು ಬರುವ ಧಾವಂತದ ಸಮಯದಲ್ಲಿ ಪ್ರತಿ 9 ನಿಮಿಷಕ್ಕೊಂದು ಮೆಟ್ರೋ ರೈಲು ಪ್ರಯಾಣಿಕರಿಗೆ ಲಭ್ಯವಾಗಲಿದೆ.

ನಾನ್-ಪೀಕ್ ಅವರ್‌ನಲ್ಲೂ ಕಾಯುವಿಕೆ ಕಡಿತ

ಕೇವಲ ಪೀಕ್ ಅವರ್ ಮಾತ್ರವಲ್ಲದೆ, ನಾನ್ ಪೀಕ್ ಅವರ್ (ದಟ್ಟಣೆ ಇಲ್ಲದ ಸಮಯ) ನಲ್ಲೂ ರೈಲುಗಳ ಅಂತರ ಕಡಿಮೆಯಾಗಲಿದೆ. ಈ ಮೊದಲು ನಾನ್ ಪೀಕ್ ಅವಧಿಯಲ್ಲಿ 18 ನಿಮಿಷಗಳಿಗೊಮ್ಮೆ ರೈಲು ಸಂಚರಿಸುತ್ತಿತ್ತು. ನಾಳೆಯಿಂದ ಈ ಅವಧಿ 14 ನಿಮಿಷಕ್ಕೆ ಇಳಿಕೆಯಾಗಲಿದೆ. ಈ ಹೊಸ ವೇಳಾಪಟ್ಟಿಯು ಸೋಮವಾರದಿಂದ ಶನಿವಾರದವರೆಗೂ ಅನ್ವಯವಾಗಲಿದೆ. ಸೋಮವಾರದಿಂದ ಶನಿವಾರದವರೆಗೆ ಮಾತ್ರ ರೈಲುಗಳ ಸಂಚಾರದ ಅಂತರದಲ್ಲಿ ಬದಲಾವಣೆಯಾಗಲಿದ್ದು, ಭಾನುವಾರದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ. ಜೊತೆಗೆ, ದಿನದ ಮೊದಲ ಮೆಟ್ರೋ ರೈಲು ಮತ್ತು ಕೊನೆಯ ಮೆಟ್ರೋ ರೈಲಿನ ಕಾರ್ಯಾಚರಣೆ ಸಮಯದಲ್ಲೂ ಯಾವುದೇ ವ್ಯತ್ಯಾಸವಿರುವುದಿಲ್ಲ, ಹಳೆಯ ಸಮಯವೇ ಮುಂದುವರಿಯಲಿದೆ. ಒಟ್ಟಿನಲ್ಲಿ ಹಳದಿ ಮಾರ್ಗದಲ್ಲಿ ಮತ್ತೊಂದು ರೈಲು ಸೇರ್ಪಡೆಯಾಗುತ್ತಿರುವುದು, ನಿತ್ಯ ಕೆಲಸ-ಕಾರ್ಯಗಳಿಗೆ ತೆರಳುವ ಈ ಭಾಗದ ಐಟಿ ಉದ್ಯೋಗಿಗಳು ಹಾಗೂ ಲಕ್ಷಾಂತರ ಪ್ರಯಾಣಿಕರಿಗೆ ದೊಡ್ಡ ರಿಲೀಫ್ ನೀಡಿದೆ.

Be the first to comment

Leave a Reply

Your email address will not be published. Required fields are marked *

ad image