ನಾಗರಹೊಳೆ, ಬಂಡೀಪುರದಲ್ಲಿ ಸಫಾರಿಗೆ ಸರ್ಕಾರ ಅಸ್ತು.. ಹೋರಾಟದ ಎಚ್ಚರಿಕೆ ಕೊಟ್ಟ ರೈತರು

ನಾಗರಹೊಳೆ, ಬಂಡೀಪುರದಲ್ಲಿ ಸಫಾರಿಗೆ ಸರ್ಕಾರ ಅಸ್ತು.. ಹೋರಾಟದ ಎಚ್ಚರಿಕೆ ಕೊಟ್ಟ ರೈತರು

ಚಾಮರಾಜನಗರ: ಹುಲಿಗಳ ನಿರಂತರ ದಾಳಿ, ರೈತರ ಆಕ್ರೋಶ ಹಿನ್ನೆಲೆ ಕಳೆದ 3 ತಿಂಗಳಿನಿಂದಲೂ ಕೂಡ ನಾಗರಹೊಳೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಸರ್ಕಾರ ಸಫಾರಿ ಬಂದ್ ಮಾಡಿ ಆದೇಶ ಹೊರಡಿಸಿತ್ತು. ಸಫಾರಿಗೆ ಪ್ರವಾಸಿಗರು ನೆರೆರಾಜ್ಯದ ಮೊರೆ ಹೋಗಿದ್ದರು. ಈ ಹಿನ್ನೆಲೆ ಒಂದೆಡೆ ಸಫಾರಿ ಆರಂಭಕ್ಕೆ ಒತ್ತಾಯ ಕೇಳಿಬಂದಿತ್ತು. ಆದರೆ ಇದೀಗ ಸರ್ಕಾರ ಸಫಾರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ ಈ ನಿರ್ಧಾರಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಹೋರಾಟದ ಹಾದಿ ಹಿಡಿಯುವ ಎಚ್ಚರಿಕೆ ಕೊಟ್ಟಿದ್ದಾರೆ.

ಮೈಸೂರು, ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಾದ ಬಂಡೀಪುರ ಹಾಗೂ ನಾಗರಹೊಳೆ ವ್ಯಾಪ್ತಿಯಲ್ಲಿ ಮಾನವ ವನ್ಯಪ್ರಾಣಿ ಸಂಘರ್ಷ ಮಿತಿಮೀರಿತ್ತು. ಈ ಹಿನ್ನೆಲೆ ಸಫಾರಿಗೆ ರೈತರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಸಫಾರಿಗಿಂತ ಜೀವಮುಖ್ಯ ಎಂಬುದನ್ನು ಅರಿತ ರಾಜ್ಯ ಸರ್ಕಾರ ಕಳೆದ ವರ್ಷ ನವೆಂಬರ್ 7ರಂದು ಸಫಾರಿ ನಿಷೇಧ ಮಾಡಿ ಆದೇಶ ಹೊರಡಿಸಿತ್ತು. ಅರಣ್ಯಾಧಿಕಾರಿಗಳು ಕಾಡಂಚಿನ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಿ, ನಿಗಾ ವಹಿಸಬೇಕು ಅಲ್ಲದೇ ವನ್ಯಜೀವಿ ಮಾನವ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮವನ್ನು ರೂಪಿಸಿತು. ಇದೀಗಾ ಕಾಡಂಚಿನ ಪ್ರದೇಶಗಳಲ್ಲಿ ವನ್ಯಜೀವಿ ಮಾನವ ಸಂಘರ್ಷ ಕಡಿಮೆಯಾಗಿದ್ದು ತಾಂತ್ರಿಕ ಸಮಿತಿ ವರದಿಯ ಮೇರೆಗೆ ಹಂತಹಂತವಾಗಿ ಮರು ಸಫಾರಿ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮತ್ತೆ ಸಚಿವರ ಆದೇಶದಂತೆ ಸಫಾರಿ ಕೂಡ ಆರಂಭವಾಗಲಿದೆ.

ಇನ್ನೂ ಮೈಸೂರು, ಚಾಮರಾಜನಗರ ಎರಡು ಜಿಲ್ಲೆಯಲ್ಲಿಯೂ ಕೂಡ ಕಾಡು ಬಿಟ್ಟು ಇದೀಗಾ ವನ್ಯಪ್ರಾಣಿಗಳು ನಾಡು ಸೇರಿದ್ದವು. ಈ ಹಿನ್ನೆಲೆ ಎರಡು ಕಡೆಯೂ ಕೂಡ 27 ಹುಲಿ ಹಾಗೂ ಮರಿಗಳನ್ನು ಸೆರೆಹಿಡಿದಿದ್ದಾರೆ. ಸಫಾರಿ ನಿಷೇಧ ಆಗಿದ್ದಕ್ಕೆ ಇಷ್ಟು ದಿನ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಒಂದು ವೇಳೆ ಮತ್ತೆ ಪ್ರಾಣ ಹಾನಿ ಸಂಭವಿಸಿದರೆ ಸರ್ಕಾರವೇ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ. ಅಲ್ಲದೇ ಸಫಾರಿ ಆರಂಭ ಮಾಡಿದ್ರೆ ಮತ್ತೆ ರೈತರು ಹೋರಾಟ ಹಾಗೂ ಪ್ರತಿಭಟನೆ ನಡೆಸುವ ಎಚ್ಚರಿಕೆ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಸರ್ಕಾರದಿಂದ ಸಫಾರಿ ನಿಷೇಧ ಬಳಿಕ ಮತ್ತೆ ಸಫಾರಿ ಆರಂಭಿಸುವಂತೆ ಹೊಟೇಲ್, ರೆಸಾರ್ಟ್ ಮಾಲೀಕರು ಮನವಿ ಮಾಡಿದ್ದರು. ಅಲ್ಲದೇ ವನ್ಯಜೀವಿಪ್ರಿಯರು ಕೂಡ ಸಫಾರಿಗೆ ನೆರೆ ರಾಜ್ಯಗಳತ್ತ ಮುಖ ಮಾಡಿದ್ದರು. ವೈಜ್ಞಾನಿಕವಾಗಿ ಸಫಾರಿ ಆರಂಭಿಸುವಂತೆ ಒತ್ತಾಯ ಕೇಳಿಬಂದಿತ್ತು, ಈ ಹಿನ್ನೆಲೆ ಸರ್ಕಾರ ಸಫಾರಿ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ ರೈತ ಸಂಘದ ಮುಖಂಡರು ಆಕ್ರೋಶ ವ್ತಕ್ತಪಡಿಸಿದ್ದು, ಸಫಾರಿ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image