ಪರೀಕ್ಷೆಯಲ್ಲಿ ನಕಲು ತಡೆದ ಶಿಕ್ಷಕರ ಮೇಲೆ ವಿದ್ಯಾರ್ಥಿಯ ಹಲ್ಲೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ನಕಲು ಮಾಡುತ್ತಿದ್ದ ವಿದ್ಯಾರ್ಥಿಯನ್ನು ಪ್ರಶ್ನಿಸಿ, ಉತ್ತರ ಪತ್ರಿಕೆಯನ್ನು ಪ್ರಾಧ್ಯಾಪಕ ವಶಪಡಿಸಿಕೊಂಡಿದ್ದಾರೆ. ಉತ್ತರ ಪತ್ರಿಕೆ ಪಡೆದು ತರಗತಿ ಕೊಠಡಿಯಿಂದ ಹೊರಗೆ ಹೋಗುವಂತೆ ಸೂಚಿಸಿದ್ದರಿಂದ ವಿದ್ಯಾರ್ಥಿ ಕೋಪಗೊಂಡು ಸಹಾಯಕ ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆ ಪರೀಕ್ಷಾ ಹಾಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ

ಕಲಬುರಗಿ, ಫೆ.20: ಪರೀಕ್ಷೆಯಲ್ಲಿ ನಕಲು (cheating) ಮಾಡುತ್ತಿದ್ದ ವಿದ್ಯಾರ್ಥಿಯನ್ನು (Student) ಪ್ರಶ್ನಿಸಿ ತಡೆಯಲು ಮುಂದಾದ ಪರೀಕ್ಷಾ ಮೇಲ್ವಿಚಾರಕರ ಮೇಲೆ ವಿದ್ಯಾರ್ಥಿಯೊಬ್ಬ ಹಲ್ಲೆ (Assault Case) ನಡೆಸಿದ ಘಟನೆ ಕಲಬುರಗಿ (kalaburagi) ನಗರದಲ್ಲಿರುವ ಡಾ. ಮಾಲಕರೆಡ್ಡಿ ಹೋಮಿಯೋಪ್ಯಾಥಿಕ್ ಮೆಡಿಕಲ್ ಕಾಲೇಜನಲ್ಲಿ ನಡೆದಿದೆ.

ಹೋಮಿಯೋಪಥಿಕ್ ಮಟೇರಿಯಾ ಮೆಡಿಕಾ ವಿಷಯದ ಆಂತರಿಕ ಪರೀಕ್ಷೆ (ಇಂಟರ್ನಲ್ ಎಕ್ಸಾಮ್) ನಡೆಯುತ್ತಿದ್ದ ವೇಳೆ ಶಹಬಾಜ್ ಎಂಬ ವಿದ್ಯಾರ್ಥಿ ಮೊಬೈಲ್ ಫೋನ್ ಬಳಸಿ ನಕಲು ಮಾಡಲು ಮುಂದಾಗಿದ್ದಾನೆ ಎನ್ನಲಾಗಿದೆ. ಈ ವೇಳೆ ಸಹಾಯಕ ಪ್ರಾಧ್ಯಾಪಕ ಶಿವರಾಜ್ ಕುಮಾರ್ ಅವರು ವಿದ್ಯಾರ್ಥಿಯನ್ನು ಪ್ರಶ್ನಿಸಿ, ಉತ್ತರ ಪತ್ರಿಕೆಯನ್ನು ವಶಪಡಿಸಿಕೊಂಡಿದ್ದಾರೆ.

ಉತ್ತರ ಪತ್ರಿಕೆ ಪಡೆದು ತರಗತಿ ಕೊಠಡಿಯಿಂದ ಹೊರಗೆ ಹೋಗುವಂತೆ ಸೂಚಿಸಿದ್ದರಿಂದ ವಿದ್ಯಾರ್ಥಿ ಕೋಪಗೊಂಡು ಸಹಾಯಕ ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆ ಪರೀಕ್ಷಾ ಹಾಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ.

ಹಲ್ಲೆ ನಡೆಯುತ್ತಿದ್ದ ಸಂದರ್ಭದಲ್ಲಿ ಇತರೆ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಬಳಿಕ ಆರೋಪಿತ ವಿದ್ಯಾರ್ಥಿ ಪರೀಕ್ಷಾ ಹಾಲ್‌ನಿಂದ ತೆರಳಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಯ ಪೋಷಕರ ಗಮನಕ್ಕೆ ವಿಚಾರವನ್ನು ತಂದಿದ್ದು, ಶಿಸ್ತು ಕ್ರಮವಾಗಿ ಮುಂದಿನ ಪರೀಕ್ಷೆಗಳಿಗೆ ಅವಕಾಶ ನೀಡದಿರಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಈವರೆಗೂ ಹಲ್ಲೆಗೆ ಒಳಗಾದ ಸಹಾಯಕ ಪ್ರಾಧ್ಯಾಪಕ ಶಿವರಾಜ್ ಕುಮಾರ್ ಅವರು ಪೊಲೀಸ್ ಠಾಣೆಯಲ್ಲಿ ಯಾವುದೇ ಅಧಿಕೃತ ದೂರು ದಾಖಲಿಸಿಲ್ಲವೆಂದು ತಿಳಿದುಬಂದಿದೆ. ಘಟನೆ ಕುರಿತು ಹೆಚ್ಚಿನ ತನಿಖೆ ಮತ್ತು ಶಿಸ್ತು ಕ್ರಮಗಳ ಬಗ್ಗೆ ಕಾಲೇಜು ಆಡಳಿತದಿಂದ ಮುಂದಿನ ಕ್ರಮಗಳನ್ನು ನಿರೀಕ್ಷಿಸಲಾಗಿದೆ.

Be the first to comment

Leave a Reply

Your email address will not be published. Required fields are marked *

ad image