ಅಮೆರಿಕಾದಲ್ಲಿ ಕರ್ನಾಟಕದ ವಿದ್ಯಾರ್ಥಿ ನಾಪತ್ತೆ.. ಆತಂಕದಲ್ಲಿ ಪೋಷಕರು

ಅಮೆರಿಕಾದಲ್ಲಿ ಕರ್ನಾಟಕದ ವಿದ್ಯಾರ್ಥಿ ನಾಪತ್ತೆ.. ಆತಂಕದಲ್ಲಿ ಪೋಷಕರು

ಬೆಂಗಳೂರು: ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿಯೊಬ್ಬರು ನಾಪತ್ತೆಯಾಗಿದ್ದಾರೆ. ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ 24 ವರ್ಷದ ಸಾಕೇತ್ ಶ್ರೀನಿವಾಸಯ್ಯ ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದಾರೆ.

ಕೆರೆಯ ದಡದಲ್ಲಿ ಸಿಕ್ತು ಬಟ್ಟೆ!

ಸಾಕೇತ್ ಶ್ರೀನಿವಾಸಯ್ಯ ಅವರು ಫೆಬ್ರವರಿ 12ರಂದು ಕ್ಯಾಲಿಫೋರ್ನಿಯಾದ ಟಿಲ್ಡೆನ್ ರೀಜನಲ್ ಪಾರ್ಕ್‌ನಲ್ಲಿರುವ ‘ಲೇಕ್ ಅಂಜಾ’ ಎಂಬ ಕೆರೆಯ ಬಳಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅವರು ಈಜಲು ಕೆರೆಗೆ ಇಳಿದಿರಬಹುದು ಎಂದು ಶಂಕಿಸಲಾಗಿದೆ. ಕೆರೆಯ ದಡದಲ್ಲಿ ಅವರ ಬಟ್ಟೆಗಳು, ಪಾದರಕ್ಷೆ ಮತ್ತು ಇತರ ವೈಯಕ್ತಿಕ ವಸ್ತುಗಳು ಪತ್ತೆಯಾಗಿವೆ. ಆದರೆ ಸಾಕೇತ್ ಅವರ ಸುಳಿವು ಮಾತ್ರ ಸಿಕ್ಕಿಲ್ಲ. ಸ್ಥಳೀಯ ಪೊಲೀಸರು, ಪಾರ್ಕ್ ರೇಂಜರ್‌ಗಳು ಮತ್ತು ನುರಿತ ಈಜುಗಾರರ ತಂಡವು ಲೇಕ್ ಅಂಜಾದಲ್ಲಿ ತೀವ್ರ ಶೋಧ ನಡೆಸುತ್ತಿದೆ. ಡ್ರೋನ್‌ಗಳು, ಹೆಲಿಕಾಪ್ಟರ್‌ಗಳ ಮೂಲಕವೂ ಗಾಳಿಯಿಂದ ಶೋಧ ಕಾರ್ಯ ಮುಂದುವರಿಸಲಾಗಿದೆ. ಕೆರೆಯ ಆಳದವರೆಗೆ ನುರಿತ ಡೈವರ್‌ಗಳು ಇಳಿದು ಹುಡುಕಾಟ ನಡೆಸುತ್ತಿದ್ದಾರೆ.

ರಾಯಭಾರ ಕಚೇರಿ ಮಧ್ಯಪ್ರವೇಶ

ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಶೋಧ ಕಾರ್ಯದ ಬಗ್ಗೆ ಮಾಹಿತಿ ಪಡೆಯುತ್ತಿದೆ. “ನಾಪತ್ತೆಯಾಗಿರುವ ವಿದ್ಯಾರ್ಥಿಯ ಪತ್ತೆಗಾಗಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ ಮತ್ತು ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದ್ದೇವೆ” ಎಂದು ರಾಯಭಾರ ಕಚೇರಿ ತಿಳಿಸಿದೆ.

ಕರ್ನಾಟಕ ಮೂಲದವರಾದ ಸಾಕೇತ್ ಅವರ ಕುಟುಂಬದವರು ಮಗನ ನಾಪತ್ತೆ ಸುದ್ದಿಯಿಂದ ಕಂಗಾಲಾಗಿದ್ದಾರೆ. ಭಾರತ ಸರ್ಕಾರ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಗನನ್ನು ಹುಡುಕಿಕೊಡಲು ಸಹಾಯ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿ ಸಾಕೇತ್ ಶೀಘ್ರವೇ ಸುರಕ್ಷಿತವಾಗಿ ಸಿಗಲಿ ಎಂದು ಅವರ ಸ್ನೇಹಿತರು ಮತ್ತು ಕುಟುಂಬದವರು ಆಶಿಸುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image