ಬೆಂಗಳೂರಿನ ಚಿಕ್ಕಪೇಟೆಯ ವಾಣಿಜ್ಯ ಮಳಿಗೆಯಲ್ಲಿ ಭಾರಿ ಅಗ್ನಿ ಅವಘಡ

ಬೆಂಗಳೂರು,ಫೆ.25-ನಗರದ ಹದಯಭಾಗವಾದ ಚಿಕ್ಕಪೇಟೆಯ ವಾಣಿಜ್ಯ ಮಳಿಗೆಯೊಂದರಲ್ಲಿ ಇಂದು ಬೆಳಿಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಶಾಪಿಂಗ್‌ಗೆ ಹೆಸರುವಾಸಿಯಾಗಿರುವ ಚಿಕ್ಕಪೇಟೆಯ ಕಮರ್ಷಿಯಲ್‌ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಸುತ್ತ ಮುತ್ತ ದಟ್ಟ ಹೊಗೆ ಆವರಿಸಿಕೊಂಡಿದ್ದರಿಂದ ಅಕ್ಕಪಕ್ಕದ ಮಳಿಗೆಯವರು ಆತಂಕಗೊಂಡಿದ್ದರು.

ಚಿಕ್ಕಪೇಟೆಯ ಕುಂಬಾರಪೇಟೆ ಬೀದಿ ಬಳಿ ಇರುವ ಮೂರು ಅಂತಸ್ತಿನ ವಾಣಿಜ್ಯ ಕಾಂಪ್ಲೆಕ್ಸ್ ನಲ್ಲಿರುವ ಹಾರ್ಡ್‌ವೇರ್‌ ಗೋದಾಮಿನಲ್ಲಿ ಇಂದು ಬೆಳಗ್ಗೆ 7.30ರ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನೋಡನೋಡುತ್ತಿದ್ದಂತೆ ದಟ್ಟ ಹೊಗೆ ಇಡೀ ಪ್ರದೇಶವನ್ನು ಆವರಿಸಿಕೊಂಡಿದೆ.

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ಈ ಕಟ್ಟಡದ ಹಾರ್ಡ್‌ವೇರ್‌ ಗೋದಾಮಿನಲ್ಲಿ ಪ್ಲಾಸ್ಟಿಕ್‌ ಪೈಪ್‌ಗಳು, ಹಾರ್ಡ್‌ವೇರ್‌ ಸಾಮಗ್ರಿಗಳು ಮತ್ತು ಇತರೆ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು. ಬೆಂಕಿ ಅವಘಡದಿಂದ ತೀವ್ರವಾದ ದಟ್ಟ ಕಪ್ಪು ಹೊಗೆ ಆಕಾಶದೆತ್ತರಕ್ಕೆ ಆವರಿಸಿದೆ.

ಕಟ್ಟಡದ ಕೆಳ ಮಹಡಿಯ ಅಂಗಡಿಗಳಿಗೂ ಬೆಂಕಿ ಹಬ್ಬುವ ಸಾಧ್ಯತೆ ಹಿನ್ನಲೆಯಲ್ಲಿ ಪೊಲೀಸರು ಈ ಕಟ್ಟಡದಲ್ಲಿರುವ ಬೇರೆ ಬೇರೆ ಅಂಗಡಿಗಳನ್ನು ಖಾಲಿ ಮಾಡಿಸಿದ್ದು ಅಂಗಡಿ ಮಾಲೀಕರು ಮತ್ತು ಗ್ರಾಹಕರು ಆತಂಕದಿಂದ ಹೊರಬರುತ್ತಿದುದ್ದು ಕಂಡು ಬಂತು.

ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿ ತುರ್ತು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೆಂಕಿ ಕೆಳ ಮಹಡಿಯಿಂದ ಮೇಲಹಡಿಗೂ ಹಬ್ಬಿಕೊಂಡಿದ್ದರಿಂದ ಗೋದಾಮಿನಲ್ಲಿದ್ದ ಪ್ಲಾಸ್ಟಿಕ್‌ ವಸ್ತುಗಳು ಬೆಂಕಿಗೆ ಆಹುತಿಯಾಗಿ ದಟ್ಟ ಹೊಗೆ ಆವರಿಸಿಕೊಂಡಿದೆ.
ಇದರಿಂದಾಗಿ ಅಗ್ನಿಶಾಮಕ ಸಿಬ್ಬಂದಿಗೆ ಉಸಿರಾಟಕ್ಕೆ ತೊಂದರೆಯಾಗಿದೆ. ಹಾಗಾಗಿ ಮಾಸ್ಕ್‌ ಹಾಕಿಕೊಂಡು ಕಾರ್ಯಾಚರಣೆ ಮಾಡುತ್ತಿದ್ದಾರೆ. ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ತರಲು ಸಿಬ್ಬಂದಿ ಹರಸಾಹಸ ಪಟ್ಟರು. ಅದೃಷ್ಟವಶಾತ್‌ ಯಾವುದೇ ಜೀವಹಾನಿಯಾಗಿಲ್ಲ. ಮತ್ತೊಂದೆಡೆ ಈ ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಗಿತ್ತು.

ಶಾರ್ಟ್‌ ಸರ್ಕ್ಯೂಟ್‌ ಶಂಕೆ:
ಬೆಂಕಿ ಅವಘಡಕ್ಕೆ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿರಬಹುದೆಂದು ಹಲಸೂರುಗೇಟ್‌ ಠಾಣೆ ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image