ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ನಿರುದ್ಯೋಗಿ ವಿರೋಧ ಪಕ್ಷದ ನಾಯಕರು ನನ್ನ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಪ್ರಯತ್ನಿಸುತ್ತಲೇ ಇದ್ದಾರೆ, ಇದರಿಂದ ಅವರೊಳಗೆ ತುಂಬಿಕೊಂಡಿರುವ ಹುಳಿ ಖಾಲಿಯಾಗಬಹುದೇ ಹೊರತು ನಮ್ಮ ಹಾಲು-ಜೇನಿನಂತಹ ಸಂಬಂಧದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎನ್ನುವುದು ಇಬ್ಬರಿಗೂ ತಿಳಿದಿರಲಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಬೆಂಗಳೂರು, ಮಾರ್ಚ್ 03: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಆರೋಪ ‘’ತಾ ಕಳ್ಳ ಇತರರ ನಂಬ’’ ಎಂಬ ಗಾದೆಯಂತಿದೆ. ಇದೊಂದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ ಎಂದು ಸಿಎಂ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.
ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ನಿರುದ್ಯೋಗಿ ವಿರೋಧ ಪಕ್ಷದ ನಾಯಕರು ನನ್ನ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಪ್ರಯತ್ನಿಸುತ್ತಲೇ ಇದ್ದಾರೆ, ಇದರಿಂದ ಅವರೊಳಗೆ ತುಂಬಿಕೊಂಡಿರುವ ಹುಳಿ ಖಾಲಿಯಾಗಬಹುದೇ ಹೊರತು ನಮ್ಮ ಹಾಲು-ಜೇನಿನಂತಹ ಸಂಬಂಧದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎನ್ನುವುದು ಇಬ್ಬರಿಗೂ ತಿಳಿದಿರಲಿ.
ಆರೋಪ ಮಾಡಿರುವ ಒಬ್ಬರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು, ಇನ್ನೊಬ್ಬರು ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿದ್ದವರು. ಅವರ ಕಾಲದಲ್ಲಿ ಕೂಡಾ ಗುಪ್ತಚರ ವಿಭಾಗ ಮುಖ್ಯಮಂತ್ರಿಯವರ ಬಳಿಯೇ ಇತ್ತು. ಅವರ ಹೇಳಿಕೆಗಳನ್ನು ಗಮನಿಸಿದರೆ ಇವರಿಬ್ಬರೂ ತಮ್ಮ ಅನುಭವದ ಬಲದಿಂದಲೇ ಈ ಆರೋಪ ಮಾಡುತ್ತಿರುವಂತೆ ಕಾಣಿಸುತ್ತಿದೆ.
ಈ ರೀತಿ ಸುಳ್ಳು ಸುದ್ದಿಗಳನ್ನು ಹರಡಿ ನಮ್ಮಿಬ್ಬರ ಸಂಬಂಧವನ್ನು ಕೆಡಿಸಿ ಡಿ.ಕೆ.ಶಿವಕುಮಾರ್ ಅವರನ್ನು ಒಲಿಸಿಕೊಳ್ಳುವ ದುರಾಲೋಚನೆ ಏನಾದರೂ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಇದ್ದರೆ, ಅವರ ಹಗಲು ಕನಸುಗಳಿಗೆ ಶುಭ ಹಾರೈಸುತ್ತೇನೆ. ಶಿವಕುಮಾರ್ ಒಬ್ಬ ಕಟ್ಟಾ ಕಾಂಗ್ರೆಸಿಗ, ಸುಳ್ಳು ಕೇಸ್ ಗಳನ್ನು ಹಾಕಿ, ಜೈಲಿಗೆ ಕಳಿಸಿ ಅವರನ್ನು ಮಣಿಸುವ ಎಲ್ಲ ಪ್ರಯತ್ನಗಳನ್ನು ಬಿಜೆಪಿ ಮಾಡಿಯಾಗಿದೆ. ಇದಕ್ಕೆಲ್ಲ ಮಣಿಯದೆ ಅವರು ಪಕ್ಷಕ್ಕೆ ನಿಷ್ಠರಾಗಿ ಉಳಿದವರು ಎನ್ನುವುದು ಈ ಕುತಂತ್ರಿ ನಾಯಕರಿಗೆ ತಿಳಿದಿರಲಿ.
2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಆದಿಚುಂಚನಗಿರಿಯ ಪೂಜ್ಯ ನಿರ್ಮಲಾನಂದನಾಥ ಸ್ವಾಮಿಗಳ ಫೋನನ್ನೆ ಕದ್ದಾಲಿಸಿದ್ದಾರೆ ಎಂದು ಈಗಿನ ಅವರ ರಾಜಕೀಯ ಸಂಗಾತಿ ಬಿ.ವೈ ವಿಜಯೇಂದ್ರ ಅವರೇ ಆರೋಪ ಮಾಡಿದ್ದರು. ಇದರ ಬಗ್ಗೆ ತನಿಖೆ ಮಾಡಿದ್ದ ಸಿಬಿಐ, ಒಬ್ಬ ಸ್ವಾಮೀಜಿಗಳದ್ದಷ್ಟೇ ಅಲ್ಲ, ಬದಲಿಗೆ ಏಳು ಸ್ವಾಮೀಜಿಗಳ ಫೋನ್ ಗಳ ಕದ್ದಾಲಿಕೆ ಮಾಡಲಾಗಿದೆ ಎಂದು ತಿಳಿಸಿತ್ತು. ನಂಬಿಕೆಗೆ ತಾನು ಅರ್ಹ ಅಲ್ಲ ಎಂದು ಸಾಬೀತು ಮಾಡಿರುವ ಕುಮಾರಸ್ವಾಮಿವರನ್ನು ಬಿಜೆಪಿಯವರು ಸುಮ್ಮನೆ ಬಿಟ್ಟಾರೆಯೇ? ಅವರ ವಿರುದ್ಧವೂ ಗೂಢಚಾರರನ್ನು ಬಿಟ್ಟಿರಬಹುದು. ಇಂತಹ ದುರ್ಬುದ್ದಿಗಾಗಿಯೇ ರಾಜ್ಯದ ಜನತೆ ಈ ಎರಡೂ ಪಕ್ಷಗಳನ್ನು ತಿರಸ್ಕರಿಸಿರುವುದು ಎನ್ನುವುದು ನೆನಪಿರಲಿ.
ಕುಮಾರಸ್ವಾಮಿಯವರಿಗೆ ಈ ಗೂಢಚರ್ಯೆಯ ಪಾಠವನ್ನು ಅವರ ಪೂಜ್ಯ ತಂದೆಯವರೇ ಹೇಳಿಕೊಟ್ಟಿರಬಹುದು. ತನ್ನನ್ನು ಪ್ರಧಾನಿ ಮಾಡಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿಯವರ ವಿರುದ್ಧವೇ ಗೂಡಚರ್ಯೆ ಮಾಡಿದ್ದ ಕಾರಣಕ್ಕೆ ಕಾಂಗ್ರೆಸ್ ಪಕ್ಷ ತನ್ನ ಬೆಂಬಲವನ್ನು ಹಿಂದೆಗೆದುಕೊಂಡಿರುವುದು ಇತಿಹಾಸದ ಪುಟಗಳಲ್ಲಿದೆ. ಈ ಅಪನಂಬಿಕೆ ಮತ್ತು ಸಣ್ಣತನಗಳಿಂದಾಗಿ ಕನ್ನಡಿಗರೊಬ್ಬರು ಇನ್ನಷ್ಟು ಕಾಲ ಪ್ರಧಾನಿಯಾಗುವ ಅವಕಾಶ ತಪ್ಪಿಹೋಯಿತು ಎನ್ನುವುದು ವಿಷಾದನೀಯ ವಾಸ್ತವ.






Be the first to comment
Leave a Reply