
ಬೆಂಗಳೂರು: ಕೌಟುಂಬಿಕ ಕಲಹ ಹಾಗೂ ಅತ್ತೆಯ ಕಿರುಕುಳ ತಾಳಲಾರದೆ 35 ವರ್ಷದ ಮಾಜಿ ಐಟಿ ಉದ್ಯೋಗಿಯೊಬ್ಬರು ಪ್ರಾಣಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸುಷ್ಮಾ (35) ಎಂದು ಗುರುತಿಸಲಾಗಿದ್ದು, ಇವರು ಈ ಹಿಂದೆ ಪ್ರತಿಷ್ಠಿತ ‘ಡೆಲ್’ (Dell) ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸುಷ್ಮಾ ಅವರು ಐದು ವರ್ಷಗಳ ಹಿಂದೆ ಪುನೀತ್ ಕುಮಾರ್ನ ವಿವಾಹವಾಗಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಗಂಡು ಮಗುವಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈ ಕುಟುಂಬದಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ. ಮಂಗಳವಾರದಂದು ಅಡುಗೆ ಮಾಡುವ ವಿಚಾರವಾಗಿ ಸುಷ್ಮಾ ಹಾಗೂ ಆಕೆಯ ಅತ್ತೆ ಕಲ್ಪನಾ ನಡುವೆ ದೊಡ್ಡ ಮಟ್ಟದ ವಾಗ್ವಾದ ನಡೆದಿದೆ. ಇದರಿಂದ ತೀವ್ರವಾಗಿ ಮನನೊಂದ ಸುಷ್ಮಾ, ಮನೆಯಲ್ಲಿ ನೇಣು ಬಿಗಿದುಕೊಂಡು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸುಷ್ಮಾ ಅವರ ಪೋಷಕರು ಗಂಡನ ಮನೆಯವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ‘ಅತ್ತೆ ಕಲ್ಪನಾ ಅವರು ಸುಷ್ಮಾಗೆ ಮನೆಯಲ್ಲಿ ಅಡುಗೆ ಮಾಡಲು ಬಿಡದೆ, ಉದ್ದೇಶಪೂರ್ವಕವಾಗಿ ನಾನಾ ರೀತಿಯಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಪದೇ ಪದೇ ಸಣ್ಣಪುಟ್ಟ ವಿಚಾರಗಳಿಗೂ ಜಗಳ ತೆಗೆಯುತ್ತಿದ್ದರು’ ಎಂದು ಆರೋಪಿಸಿದ್ದಾರೆ. ಘಟನೆ ಬಳಿಕ ಸುಷ್ಮಾ ಅವರ ಕುಟುಂಬಸ್ಥರು ಗಂಡನ ಕಡೆಯವರ ವಿರುದ್ಧ ‘ವರದಕ್ಷಿಣೆ ಕಿರುಕುಳ’ದ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈಗಾಗಲೇ ಪತಿ ಪುನೀತ್ ಕುಮಾರ್‌ನನ್ನು ಬಂಧಿಸಿದ್ದಾರೆ. ಇತ್ತ ಘಟನೆ ಬಳಿಕ ತಲೆಮರೆಸಿಕೊಂಡಿರುವ ಅತ್ತೆ ಕಲ್ಪನಾ ಅವರಿಗಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಸದ್ಯ ಪೊಲೀಸ್ ತನಿಖೆ ಮುಂದುವರಿದಿದೆ.






Be the first to comment
Leave a Reply