
ವಾರ್ಷಿಕ ವಹಿವಾಟು 5,000 ಕೋಟಿಗೆ ಹೆಚ್ಚಿಸುವ ಗುರಿ
ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) ತಯಾರಿಸುವ ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆಯ ಅಂಗವಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ (Tamanna Bhatia) ಅವರನ್ನು 2 ವರ್ಷಗಳ ಅವಧಿಗೆ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ. ಅವರ ಈ ಕೆಲಸವು ಮಂಗಳವಾರದಿಂದ (ಫೆ.10) ವಿಧ್ಯುಕ್ತವಾಗಿ ಆರಂಭವಾಗಲಿದೆ. ಇದೇ ಸಂದರ್ಭದಲ್ಲಿ ಪಾರಂಪರಿಕ ಹೆಮ್ಮೆಯ ಉತ್ಪನ್ನವಾಗಿರುವ ಮೈಸೂರು ಸ್ಯಾಂಡಲ್ ಸೋಪನ್ನು (Mysore Sandal Soap) ನವನವೀನ ರೂಪದಿಂದಿಗೆ ಬಿಡುಗಡೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ
ಈ ಬಗ್ಗೆ ಮಾತನಾಡಿರುವ ಸಚಿವರು, `ಕೆಎಸ್ಡಿಎಲ್ ಸಂಸ್ಥೆಯ ವಾರ್ಷಿಕ ವಹಿವಾಟನ್ನು 2030 ರ ಹೊತ್ತಿಗೆ 5,000 ಕೋಟಿ ರೂ. ಗಳಿಗೆ ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಯುವಜನಾಂಗವನ್ನ ತಲುಪಲು ವ್ಯಾಪಕ ಪ್ರಚಾರ ಆಂದೋಲವನ್ನು ನಡೆಸಲಾಗುತ್ತಿದೆ. ಇದಕ್ಕಾಗಿ, ಸೋಷಿಯಲ್ ಮೀಡಿಯಾದಲ್ಲಿ 30 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ತಾರಾ ವರ್ಚಸ್ಸಿನ ನಟಿ ತಮನ್ನಾ ಅವರನ್ನ ನೇಮಿಸಿಕೊಳ್ಳಲಾಗುತ್ತಿದೆ. ಈ ಮೂಲಕ ಉತ್ತರ ಭಾರತದಲ್ಲಿ ಕೂಡ ಪ್ರತಿಷ್ಠಿತ ಮೈಸೂರು ಸ್ಯಾಂಡಲ್ ಸೋಪ್ ಸಹಿತ ನಮ್ಮ ಸಂಸ್ಥೆಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೃಷ್ಟಿಸಿಕೊಳ್ಳಲಾಗುವುದು’ ಎಂದಿದ್ದಾರೆ.
ಕೆಎಸ್ಡಿಎಲ್ ಸಂಸ್ಥೆಗೆ ಶತಮಾನಕ್ಕೂ ಮೀರಿದ ಭವ್ಯ ಪರಂಪರೆ ಇದೆ. ಇದು ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಕೈಗಾರಿಕಾ ರಸಾಯನಶಾಸ್ತ್ರಜ್ಞ ಎಸ್.ಜಿ ಶಾಸ್ತಿ (ಸೋಪ್ ಶಾಸ್ತ್ರಿ) ಅವರ ದೂರದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದ ಉದ್ಯಮವಾಗಿದೆ. ಒಳ್ಳೆಯ ವಹಿವಾಟು ಮತ್ತು ಲಾಭವನ್ನ ಕಾಣುತ್ತಿರುವ ಸಂಸ್ಥೆಯು ಹೋದ ತಿಂಗಳು ಸಾಬೂನು, ಮಾರ್ಜಕ ಮತ್ತು ಸೌಂದರ್ಯವರ್ಧಕ ಈ ಮೂರು ವಿಭಾಗಗಳಲ್ಲೂ ಸಾರ್ವಕಾಲಿಕ ಉತ್ಪಾದನೆ ಮಾಡಿದೆ ಎಂದು ಅವರು ಹೇಳಿದ್ದಾರೆ.

ಸಂಸ್ಥೆಯಲ್ಲಿ ಈಗ ಒಟ್ಟು 57 ಉತ್ಕೃಷ್ಟ ಉತ್ಪನ್ನಗಳನ್ನ ತಯಾರಿಸಲಾಗುತ್ತಿದೆ. ಇದರಲ್ಲಿ ಮೈಸೂರು ಸ್ಯಾಂಡಲ್ ಸೋಪಿನಿಂದ ಹಿಡಿದು ಕುಡಿಯುವ ನೀರಿನವರೆಗೂ ವ್ಯಾಪ್ತಿ ಇದೆ. ಪ್ರಚಾರ ರಾಯಭಾರಿಯಾಗಿರುವ ತಮನ್ನಾ ಅವರು ಕೆಎಸ್ಡಿಎಲ್ ಉತ್ಪನ್ನಗಳ ಪ್ರಸಾರ ಜಾಹೀರಾತು, ಕಾರ್ಯಕ್ರಮ ಇತ್ಯಾದಿಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಅವರು ಉಳಿದ ಖಾಸಗಿ ಕಂಪನಿಗಳ ಇದೇ ತರಹದ ಉತ್ಪನ್ನಗಳ ಪ್ರಚಾರಾರ್ಥ ರೂಪದರ್ಶಿಯಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಅವರು ನುಡಿದಿದ್ದಾರೆ.
ಮೈಸೋಪು ಸೇರಿದಂತೆ ಸಂಸ್ಥೆಯ ಶವರ್ ಜೆಲ್, ಟಾಲ್ಕಂ ಪೌಡರ್, ಹ್ಯಾಂಡ್ ವಾಶ್, ಅಗರಬತ್ತಿ, ಸಾಂಬ್ರಾಣಿ, ಧೂಪ, ಮಿಲೆನಿಯಂ ಸೋಪ್ ಮುಂತಾದವುಗಳಿಗೆ ಅಪಾರ ಬೇಡಿಕೆ ಇದೆ. ಪ್ರಚಾರಾರ್ಥವಾಗಿ ಸಿದ್ಧಪಡಿಸಿರುವ ವಿಡಿಯೋ ಇತ್ಯಾದಿಗಳನ್ನು ಕೂಡ ಮಂಗಳವಾರ ಬಿಡುಗಡೆ ಮಾಡಲಾಗುವುದು. ಜತೆಗೆ ವಿಜಯಪುರ ಮತ್ತು ಡಾಬಸ್ಪೇಟೆ ಕೈಗಾರಿಕಾ ಪ್ರದೇಶಗಳಲ್ಲಿ ಸಂಸ್ಥೆಯ ಉತ್ಪಾದನಾ ಘಟಕಗಳನ್ನು ಸದ್ಯದಲ್ಲೇ ಆರಂಭಿಸಲಾಗುವುದು. ಈ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಜೊತೆಗೆ ಈಗ 25-30 ಕೋಟಿ ರೂ. ಆಸುಪಾಸಿನಲ್ಲಿರುವ ರಫ್ತು ವಹಿವಾಟನ್ನು ಮುಂದಿನ ದಿನಗಳಲ್ಲಿ ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ ಎಂದು ಪಾಟೀಲ ಮಾಹಿತಿ ನೀಡಿದ್ದಾರೆ






Be the first to comment
Leave a Reply