ಪೊಲೀಸ್‌‍ ವೇಷದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌

ಬೆಂಗಳೂರು – ಪೊಲೀಸ್‌‍ ಸಮವಸ್ತ್ರದಲ್ಲಿ ರಿಯಲ್‌ ಎಸ್ಟೇಟ್‌ ಏಜೆಂಟ್‌ ಮನೆಗೆ ನುಗ್ಗಿ ದರೋಡೆ ಮಾಡಿರುವ ಪ್ರಕರಣದ ಹಿಂದೆ ಪೆರೋಲ್‌ ಮೇಲೆ ಹೊರಬಂದಿದ್ದ ಖೈದಿಯ ಕೈವಾಡ ಇರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

 

ಫೆ.16 ರಂದು ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಬಿಇಎಲ್‌ ಲೇ ಔಟ್‌ ನಿವಾಸಿ ಹೊಂಬಾಳೆಗೌಡ ಎಂಬುವರ ಮನೆಗೆ ಇಬ್ಬರು ದರೋಡೆಕೋರರು ನುಗ್ಗಿದ್ದು, ಅದರಲ್ಲಿ ಒಬ್ಬಾತ ನಾನು ಯಲಹಂಕ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಎಂದು ಪರಿಚಯಿಸಿಕೊಂಡಿದ್ದಾನೆ.

ನಂತರ ಏಕಾಏಕಿ ಒಳಗೆ ಹೋಗಿ ಚಾಕುವಿನಿಂದ ದಂಪತಿಯನ್ನು ಬೆದರಿಸಿ, ಕಿರುಚಾಡದಂತೆ ಬಾಯಿಗೆ ಟೇಪ್‌ ಸುತ್ತಿ, ಅವರನ್ನು ಕಟ್ಟಿ ಹಾಕಿ 20 ಲಕ್ಷ ರೂ. ನಗದು ಹಾಗೂ 500 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿ ದರೋಡೆಕೋರರು ಪರಾರಿಯಾಗಿದ್ದಾರೆ.

ಹಾಡಹಗಲೇ ನಡೆದಿರುವ ಈ ದರೋಡೆ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ದರೋಡೆಯ ಹಿಂದೆ ಪೆರೋಲ್‌ ಮೇಲೆ ಹೊರಬಂದಿರುವ ಕುಖ್ಯಾತ ಖೈದಿಯ ಕೈವಾಡ ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳ್ಳತನ ನಡೆದ ಸ್ಥಳದಲ್ಲಿ
ಸೋಕೋ ತಂಡ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದಾಗ ಅವರಿಗೆ ಮಹತ್ವದ ಸುಳಿವು ಲಭ್ಯವಾಗಿವೆ.

ಆ ಮಾಹಿತಿಯನ್ನಾಧರಿಸಿ ಬೆರಳಚ್ಚುಗಳನ್ನು ಪರೀಕ್ಷೆ ಮಾಡಿದಾಗ ಈಗಾಗಲೇ ಜೈಲಿನಲ್ಲಿರುವ ಒಬ್ಬ ಖೈದಿಯ ಬೆರಳಚ್ಚಿಗೆ ತಾಳೆಯಾಗಿದೆ. ಇದು ಪೊಲೀಸರನ್ನು ಬೆಚ್ಚಿ ಬೀಳಿಸಿತ್ತು. ಜೈಲಿನಲ್ಲಿರುವ ವ್ಯಕ್ತಿ ದರೋಡೆ ಮಾಡಲು ಹೇಗೆ ಸಾಧ್ಯ? ಎಂಬ ಹಲವಾರು ಪ್ರಶ್ನೆಗಳು ಪೊಲೀಸರಿಗೆ ಮೂಡಿವೆ.

ತದನಂತರದಲ್ಲಿ ತನಿಖೆ ಮುಂದುವರೆಸಿದಾಗ ಖೈದಿಯು ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದಿರುವುದು ಗೊತ್ತಾಗಿದೆ. ದರೋಡೆ ನಡೆದ ಮರುದಿನವೇ ಆತ ಪುನಃ ಜೈಲಿಗೆ ವಾಪಸ್‌‍ ಹೋಗಿದ್ದಾನೆ ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಜೈಲಿನಿಂದ ಹೊರಬರುತ್ತಿದ್ದಂತೆ ಆ ಖೈದಿಯು ದರೋಡೆಗೆ ಸಹಚರನೊಂದಿಗೆ ಸೇರಿಕೊಂಡು ಸಂಚು ರೂಪಿಸಿ ಯಾರಿಗೂ ಅನುಮಾನ ಬಾರದಂತೆ ರಿಯಲ್‌ ಎಸ್ಟೇಟ್‌ ಏಜೆಂಟ್‌ ಮನೆಗೆ ನುಗ್ಗಿ ದರೋಡೆ ಮಾಡಿ ನಂತರ ಯಾರಿಗೂ ಅನುಮಾನ ಬಾರದಂತೆ ಮತೆ ಜೈಲು ಸೇರಿದ್ದಾನೆ.

ಬ್ಯಾಡರಹಳ್ಳಿ ಠಾಣೆ ಪೊಲೀಸರು ಜೈಲಿನಲ್ಲಿರುವ ಖೈದಿಯನ್ನು ಬಾಡಿ ವಾರೆಂಟ್‌ ಮೇಲೆ ವಶಕ್ಕೆ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಮುಂದಾಗಿದ್ದಾರೆ.

ರಿಯಲ್‌ ಎಸ್ಟೇಟ್‌ ಏಜೆಂಟ್‌ ಹೊಂಬಾಳೆಗೌಡ ಅವರು ಇತ್ತೀಚೆಗೆ ಜಮೀನು ಮಾರಾಟ ಮಾಡಿದ್ದು, ಸುಮಾರು ಒಂದೂವರೆ ಕೋಟಿ ರೂ. ಹಣ ಮನೆಯಲ್ಲಿಟ್ಟಿದ್ದಾರೆ ಎಂಬ ವಿಚಾರ ದರೋಡೆಕೋರರಿಗೆ ಗೊತ್ತಾಗಿದ್ದು ಹೇಗೆ ಎಂಬುದೇ ಪೊಲೀಸರಿಗೆ ದೊಡ್ಡ ಪ್ರಶ್ನೆಯಾಗಿದೆ.
ಹೊಂಬಾಳೆಗೌಡ ಅವರ ಮನೆಯಲ್ಲಿ ಅಷ್ಟೊಂದು ದೊಡ್ಡ ಮೊತ್ತದ ಹಣ ಇರುವುದು ಕುಟುಂಬದವರಿಗೆ ಮಾತ್ರ ತಿಳಿದಿರುವುದರಿಂದ ಆ ಕುಟುಂಬ ಸದಸ್ಯರ ಮೇಲೆಯೂ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿಯೂ ಸಹ ತನಿಖೆ ನಡೆಯುತ್ತಿದೆ.

Be the first to comment

Leave a Reply

Your email address will not be published. Required fields are marked *

ad image