ವಿಜಯನಗರ: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬಿಸಿ ಮುಟ್ಟಿಸಿದೆ. ವಿಜಯನಗರದಲ್ಲಿ ಲೋಕೋಪಯೋಗಿ ಇಲಾಖೆಯ ಇಬ್ಬರು ಅಧಿಕಾರಿಗಳು 1 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಾಮಗಾರಿ ಬಿಲ್ ಮಂಜೂರಿಗಾಗಿ ಗುತ್ತಿಗೆದಾರರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಗುತ್ತಿಗೆದಾರ ಪೊಲೀಸರಿಗೆ ನೀಡಿದ ದೂರು ನೀಡಿದ್ದರು. ದೂರಿನ ಹಿನ್ನೆಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತರ ಬಲೆಗೆ PWD ಅಧಿಕಾರಿಗಳು ಬಿದ್ದಿದ್ದಾರೆ.

ಹೂವಿನ ಹಡಗಲಿಯ ಮಹೇಶ್ ಹಲಗೇರಿ ಎಂಬ ಗುತ್ತಿಗೆದಾರರು ಲೋಕೋಪಯೋಗಿ ಇಲಾಖೆಯ ಕಾಮಗಾರಿ ಟೆಂಡರ್ ಪಡೆದು ಕೆಲಸ ಪೂರ್ಣಗೊಳಿಸಿದ್ದರು. ಆದರೆ ಕಾಮಗಾರಿಯ ಬಿಲ್ ಬಿಡುಗಡೆ ಮಾಡಲು ದೇವದಾಸ್ ಹಾಗೂ ಅಕೌಂಟೆಂಟ್ ಮಾರುತಿ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸತ್ತ ಮಹೇಶ್ ಹಲಗೇರಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಲೋಕಾಯುಕ್ತ DySP ಸಚಿನ್ ಎಸ್ ಛಲವಾದಿ ನೇತೃತ್ವದಲ್ಲಿ ದಾಳಿ ನಡೆಸಿ ಲಂಚ ಸ್ವೀಕರಿಸುವಾಗ ಇಬ್ಬರನ್ನ ವಶಕ್ಕೆ ಪಡೆದಿದ್ದಾರೆ.
ಕಳೆದ ತಿಂಗಳು ಕಲಬುರಗಿಯಲ್ಲಿ ಕಮಲಾಪುರ ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಶಶಿಕುಮಾರ್ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಂದ ಬಂಧಿಸಲ್ಪಟ್ಟಿದ್ದರು. ಜಮೀನು ದಾಖಲೆಗಳನ್ನು ನೀಡುವ ವಿಚಾರದಲ್ಲಿ ಪುಟ್ಟ ಕಿಶನ್ ರಾಥೋಡ್ ಅವರಿಂದ 20,000 ರೂ.ಗಿಂತ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿತ್ತು. ಈ ಕುರಿತು ಕಿಶನ್ ನೀಡಿದ ದೂರಿನ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಹಣ ಸ್ವೀಕರಿಸುವ ಕ್ಷಣದಲ್ಲೇ ಶಶಿಕುಮಾರ್ ಅವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದರು. ಇನ್ನೊಂದು ಪ್ರಕರಣದಲ್ಲಿ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು 4 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಚೀಟಿ ವ್ಯವಹಾರ ಪ್ರಕರಣದಲ್ಲಿ ಬೆದರಿಕೆ ಹಾಕಿ ಒಟ್ಟು 5 ಲಕ್ಷ ರೂ. ಬೇಡಿಕೆ ಇಟ್ಟಿದ್ದರೆಂದು ದೂರಿನಲ್ಲಿ ಉಲ್ಲೇಖವಾಗಿತ್ತು. ಈಗಾಗಲೇ 1 ಲಕ್ಷ ರೂ. ಪಡೆದಿದ್ದ ಅವರು, ಉಳಿದ ಹಣ ಸ್ವೀಕರಿಸುವಾಗ ಟ್ರ್ಯಾಪ್ ಆಗಿದ್ದರು.






Be the first to comment
Leave a Reply