ಸಿಎಂ ಸ್ಥಾನಕ್ಕೆ ನಾನು ಸಮರ್ಥನಿದ್ದೇನೆ, ಕೇಳುವುದರಲ್ಲಿ ತಪ್ಪೇನಿದೆ..? ಗದ್ದುಗೆ ಗುದ್ದಾಟಕ್ಕೆ ಪರಮೇಶ್ವರ್ ಎಂಟ್ರಿ

ಬೆಂಗಳೂರು, ಫೆ.25- ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸಮರ್ಥನಿದ್ದೇನೆ. ಈವರೆಗೂ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿ, ಅದನ್ನು ಸಾಬೀತು ಪಡಿಸಿದ್ದೇನೆ ಎಂದು ಹೇಳುವ ಮೂಲಕ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮತ್ತೊಮೆ ಅಕಾಡ ಪ್ರವೇಶಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಗ್ಗೆಯಾಗಲಿ ಅಥವಾ ಬದಲಾವಣೆಯ ಕುರಿತಾಗಲಿ ಹಾದಿ ಬೀದಿಯಲ್ಲಿ ಚರ್ಚೆ ಮಾಡಲು ಸಾಧ್ಯವಿಲ್ಲ. ಹೆಚ್ಚೆಂದರೆ ಪಕ್ಷದ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡಬಹುದು. ಉಳಿದಂತೆ ಹೈಕಮಾಂಡ್‌ ನಾಯಕರು ನಾಲ್ಕು ಗೋಡೆಗಳ ನಡುವೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಯಾರಾದರೂ ನನ್ನ ಹೆಸರನ್ನು ಕೂಗಿದ ತಕ್ಷಣ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಹಾಗೆ ಕೂಗುವುದನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ. ನನ್ನ ಸಾಮರ್ಥ್ಯವನ್ನು ಎಷ್ಟು ಬಾರಿ ಸಾಬೀತುಪಡಿಸಬೇಕು. ಕೆಪಿಸಿಸಿ ಅಧ್ಯಕ್ಷನಾಗಿ ಎಂಟು ವರ್ಷ ಕೆಲಸ ಮಾಡಿದ್ದೇನೆ. ಎರಡು ಬಾರಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ. ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ.

ಸಾಮರ್ಥ್ಯ ಇಲ್ಲದೆ ಇದ್ದರೆ ಉಪಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿತ್ತೆ. ನನ್ನ ಸಾಮರ್ಥ್ಯದ ಬಗ್ಗೆ ಯಾರು ಪ್ರಶ್ನೆ ಮಾಡುವಂತಿಲ್ಲ. ಹಲವಾರು ಬಾರಿ ನಾನು ಅದನ್ನು ಸಾಬೀತುಪಡಿಸಿದ್ದೇನೆ. ಆದರೆ ಸನ್ನಿವೇಶ ಮತ್ತು ಪಕ್ಷದ ತೀರ್ಮಾನ ಎಲ್ಲವನ್ನೂ ಆಧರಿಸಿರುತ್ತದೆ ಎಂದರು.

ಪರಮೇಶ್ವರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಬೆಂಬಲಿಗರು ಘೋಷಣೆ ಕೂಗುತ್ತಿರುವುದರಲ್ಲಿ ತಪ್ಪೇನಿದೆ. ಒಂದು ವೇಳೆ ತಪ್ಪಿದ್ದರೆ ಯಾರಾದರೂ ಹೇಳಲಿ. ಸರಿಪಡಿಸೋಣ ಎಂದು ಮಾರ್ಮಿಕವಾಗಿ ಹೇಳಿದರು.

ಇದರ ಹೊರತಾಗಿ ತಾವು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ. ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಹೇಳಿಕೆ ನೀಡಿದರೆ ಸಾರ್ವಜನಿಕವಾಗಿ ಚರ್ಚೆಯಾಗಬಹುದಷ್ಟೆ ಎಂದರು.

ಸಚಿವ ಸತೀಶ್‌ ಜಾರಕಿಹೊಳಿ, ಸಚಿವ ಕೆ.ಎನ್‌.ರಾಜಣ್ಣ ಅವರನ್ನು ನಾನು ಭೇಟಿ ಮಾಡಿಲ್ಲ ಅವರು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿರುವ ಪರಮೇಶ್ವರ್‌ ಅವರಿಗೆ ಮೊದಲು ಕೂಲಿ ಕೊಡಿ ಎಂದು ರಾಜಣ್ಣ ಹೇಳಿರುವುದು ತಪ್ಪಲ್ಲ ಎಂದರು.

ತಮಗೆ ದೆಹಲಿಗೆ ಹೋಗಲು ಯಾರ ಅನುಮತಿಯ ಅಗತ್ಯ ಇಲ್ಲ. ಅಗತ್ಯ ಬಿದ್ದರೆ ಭೇಟಿ ನೀಡುತ್ತೇನೆ, ನಾನು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದೇನೆ. ಅದಕ್ಕೆ ಸಂಬಂಧಪಟ್ಟಂತೆ ದೆಹಲಿಗೆ ಹೋಗುತ್ತೇನೆ. ಪೋಲೀಸ್‌‍ ಇಲಾಖೆಯ ಕೆಲಸಗಳ ಕುರಿತು ದೆಹಲಿಗೆ ಹೋಗಬಹುದು. ರಾಜಕೀಯವಾಗಿ ಚರ್ಚಿಸುವ ಅಗತ್ಯವಿದ್ದರೆ ಹೈಕಮಾಂಡ್‌ ಭೇಟಿಗಾಗಿಯೂ ಹೋಗುತ್ತೇನೆ ಅದರಲ್ಲಿ ವಿಶೇಷ ಏನು ಇಲ್ಲ ಎಂದರು.

ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ. ಅಪ್ರಪ್ತ ಬಾಲಕನ ಹತ್ಯೆಗೆ ನಿಖರವಾದ ಕಾರಣವನ್ನು ತನಿಖೆ ನಡೆಸಲಾಗುತ್ತಿದೆ. ಆರೋಪಕ್ಕೆ ಗುರಿಯಾಗಿರುವ ಬಾಲಕರು ಈ ಮೊದಲು ಕೂಡ ಗಲಾಟೆ ಮಾಡಿಕೊಂಡಿದ್ದರು.

ಮೇಲ್ನೋಟದ ಮಾಹಿತಿಯ ಪ್ರಕಾರ ಸಹಪಾಠಿಗಳು ಕೈಗಳಿಂದ ಗುದ್ದಿದ್ದರಿಂದಾಗಿ ಬಾಲಕ ಸಾವನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಯಾವ ಮಾತಿನಿಂದ ಗಲಾಟೆ ನಡೆದಿದೆ ಎಂದು ಗೊತ್ತಿಲ್ಲ. ಪೊಲೀಸರು ತಪ್ಪಿತಸ್ಥರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆ. ಸದ್ಯಕ್ಕೆ ಶಿವಮೊಗ್ಗದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಸಾರ್ವಜನಿಕರು ಶಾಂತಿ ಪಾಲನೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪೊಲೀಸ್‌‍ ಇಲಾಖೆಯಲ್ಲಿ ವಿವಿಧ ಹಂತಗಳಲ್ಲಿ 17 ಸಾವಿರ ಹುದ್ದೆಗಳು ಖಾಲಿ ಇವೆ. ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ನೇಮಕಾತಿ ಮಾಡಿಲ್ಲ. ನಮ ಸರ್ಕಾರ ಅಧಿಕಾರಕ್ಕೆ ಬಂದಾಗ ಒಳ ಮೀಸಲಾತಿಯ ಗೊಂದಲ ಇತ್ತು. ಬಿಜೆಪಿ ಸರ್ಕಾರ ಸದಾಶಿವ ಆಯೋಗವನ್ನು ತಿರಸ್ಕರಿಸಿತ್ತು. ಸುಪ್ರೀಂಕೋರ್ಟ್‌ ಆದೇಶದಂತೆ ನಮ ಸರ್ಕಾರ ಗೊಂದಲವನ್ನು ಬಗೆಹರಿಸಿದೆ. ಈಗ ನೇಮಕಾತಿಗಳು ಶುರುವಾಗುತ್ತವೆ ಎಂದರು.

ಪೋಲಿಸ್‌‍ ಇಲಾಖೆಯಲ್ಲಿ 4 ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಲು ಹಣಕಾಸು ಇಲಾಖೆ ಮಂಜೂರಾತಿ ನೀಡಿದೆ. ಒಟ್ಟು ಹುದ್ದೆಗಳಲ್ಲಿ ಒಂಬತ್ತು ಸಾವಿರ ಕಾನ್‌್ಸಟೆಬಲ್‌ ಹುದ್ದೆಗಳಿವೆ. ಅವುಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಬೆಂಗಳೂರಿನ ಪೊಲೀಸ್‌‍ ಠಾಣೆಗಳಲ್ಲಿ ಸಬ್‌ ಇನ್ಸ್ ಪೆಕ್ಟರ್‌ ಗಳಿಲ್ಲ ಎಂದು ಟೀಕೆ ಮಾಡುತ್ತಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ 545 ಪಿಎಸ್‌‍ಐ ಹುದ್ದೆಗಳ ನೇಮಕಾತಿ ಹಗರಣ ನಡೆದಿದ್ದು ಯಾವಾಗ ಎಂದು ನೆನಪಿದೆಯಲ್ಲವೇ ? ಆ ಹಗರಣದಿಂದಾಗಿ ಎರಡನೇ ಹಂತದಲ್ಲಿ 402 ಹುದ್ದೆಗಳ ನೇಮಕಾತಿಗೆ ಅನುಮತಿ ದೊರೆತರೂ ಪ್ರಕ್ರಿಯೆ ಆರಂಭಿಸಲಾಗಲಿಲ್ಲ.

ಈಗ ಮೊದಲ ಹಂತದಲ್ಲಿ 545 ಪಿಎಸ್‌‍ಐ ಗಳು ತರಬೇತಿ ಮುಗಿಸಿ ಇನ್ನೆರಡು ತಿಂಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಅವರನ್ನು ವಿಭಾಗವಾರು ನಿಯೋಜನೆ ಮಾಡಲಾಗುತ್ತದೆ. ಅಲ್ಲಿನ ಐಜಿಗಳು ಯಾವ ಠಾಣೆಗೆ ವರ್ಗಾವಣೆ ಮಾಡಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಎರಡನೇ ಹಂತದಲ್ಲಿ 402 ಹುದ್ದೆಗಳನ್ನು ಸೇರಿ ಒಟ್ಟು ಸುಮಾರು 900 ಪಿಎಸ್‌‍ಐಗಳು ಇಲಾಖೆಗೆ ದೊರೆಯುತ್ತಿದ್ದಾರೆ ಎಂದು ಹೇಳಿದರು.

ಅಜಿಂ ಪ್ರೇಮ್‌ ಜಿ ವಿಶ್ವವಿದ್ಯಾಲಯದಲ್ಲಿ ವಿಚಾರ ಸಂಕೀರ್ಣ ನಡೆಯುತ್ತಿದ್ದಾಗ ಎಬಿವಿಪಿ ಕಾರ್ಯಕರ್ತರು ನುಗ್ಗಿ ಗಲಾಟೆ ಮಾಡಿರುವುದು ಸರಿಯಲ್ಲ. ವಿಚಾರ ಸಂಕೀರ್ಣದ ವಿಷಯ ಏನೇ ಇರಲಿ, ಅಲ್ಲಿ ಚರ್ಚೆಯಾದ ಕ್ಷಣ ಏನು ಪರಿಣಾಮವಾಗುವುದಿಲ್ಲ. ಅದಕ್ಕಾಗಿ ಗಲಾಟೆ ಮಾಡುವುದು, ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಯತ್ನಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಅದನ್ನು ಸಹಿಸುವುದಿಲ್ಲ. ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Be the first to comment

Leave a Reply

Your email address will not be published. Required fields are marked *

ad image