Actor Jayaram: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಹೊಸದೊಂದು ಹೆಜ್ಜೆ ಇಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಈಗ ಕಾಂತಾರ ಸಿನಿಮಾ ನಟ ಜಯರಾಂ ಅವರನ್ನು ವಿಚಾರಣೆಗೆ ಕರೆದಿದೆ. ಹಾಗಾದರೆ, ಈ ಕೇಸ್ನ ಮುಂದಿನ ಭವಿಷ್ಯವೇನು?

ನಟ ಜಯರಾಂಗೆ ಸಮನ್ಸ್
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಇ.ಡಿ, ನಟ ಜಯರಾಂಗೆ ಸಮನ್ಸ್ ನೀಡಿದೆ. ನಿನ್ನೆ ಈ ನೋಟಿಸ್ ಕಳುಹಿಸಲಾಗಿದ್ದು, ಮುಂದಿನ ವಾರ ಕೊಚ್ಚಿಯಲ್ಲಿರುವ ಇ.ಡಿ ಕಚೇರಿಗೆ ಹಾಜರಾಗುವಂತೆ ಜಯರಾಂಗೆ ಸೂಚಿಸಲಾಗಿದೆ. ಚಿನ್ನ ಕಳ್ಳತನ ಪ್ರಕರಣದ ಮೊದಲ ಆರೋಪಿ ಉನ್ನಿಕೃಷ್ಣನ್ ಪೋಟ್ಟಿ ಜೊತೆಗಿನ ಸಂಬಂಧದ ಬಗ್ಗೆ ಸ್ಪಷ್ಟನೆ ಪಡೆಯಲು ಇ.ಡಿ ಜಯರಾಂ ಅವರನ್ನು ಕರೆದಿದೆ.
ಆರೋಪಿ ಪಟ್ಟಿಯಲ್ಲಿ ಮೂವರು
ಆರೋಪಿಗಳು ಶಬರಿಮಲೆಯ ಚಿನ್ನವನ್ನು ಬಳಸಿ ಯಾವುದೇ ರೀತಿಯ ಆರ್ಥಿಕ ಲಾಭ ಪಡೆದಿದ್ದಾರೆಯೇ ಎಂಬುದರ ಬಗ್ಗೆ ಇ.ಡಿ ತನಿಖೆ ನಡೆಸುತ್ತಿದೆ. ಪೋಟ್ಟಿ ಜೊತೆಗಿನ ಆರ್ಥಿಕ ವ್ಯವಹಾರಗಳ ಕುರಿತು ವಿಚಾರಣೆ ನಡೆಸಲು ಇ.ಡಿ ಜಯರಾಂಗೆ ಸಮನ್ಸ್ ನೀಡಿದೆ. ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಾಹಿತಿ ಪಡೆಯಲು ಇ.ಡಿ ಒಟ್ಟು 12 ಜನರಿಗೆ ಸಮನ್ಸ್ ಕಳುಹಿಸಿದೆ. ಇವರಲ್ಲಿ ಕೇವಲ 3 ಮಂದಿ ಮಾತ್ರ ಎಸ್ಐಟಿಯ ಆರೋಪಿಗಳ ಪಟ್ಟಿಯಲ್ಲಿದ್ದಾರೆ.
ವಿಶೇಷ ವಸ್ತು ಇಟ್ಟು ಪೂಜೆ
ನಿರ್ಮಾಣದ ಸಮಯದಲ್ಲಿ, ಆರೋಪಿ ಪೋಟ್ಟಿ ಶಬರಿಮಲೆಯ ದ್ವಾರದ ಚೌಕಟ್ಟು ಮತ್ತು ಬಾಗಿಲನ್ನು ಹಲವು ಸ್ಥಳಗಳಿಗೆ ಕೊಂಡೊಯ್ದು ಪೂಜೆ ಮತ್ತು ಪ್ರಾರ್ಥನೆಗಳನ್ನು ನಡೆಸಿದ್ದ. ಇದರ ಹೆಸರಿನಲ್ಲಿ ಆತ ಜನರಿಂದ ಹಣವನ್ನೂ ವಸೂಲಿ ಮಾಡಿದ್ದ. ಶಬರಿಮಲೆಯ ಇಂತಹ ವಿಶೇಷ ವಸ್ತುಗಳನ್ನು ಮನೆಗೆ ತಂದರೆ ಐಶ್ವರ್ಯ ಬರುತ್ತದೆ ಎಂದು ನಂಬಿಸಿ ಹಲವೆಡೆ ಪೂಜೆ ಮಾಡಿಸಿದ್ದ. ಚೆನ್ನೈನಲ್ಲಿ ಪೋಟ್ಟಿ ಜೊತೆಗಿನ ಪರಿಚಯದ ಹಿನ್ನೆಲೆಯಲ್ಲಿ, ಶಬರಿಮಲೆಯ ವಿಶೇಷ ವಸ್ತುಗಳನ್ನು ಮನೆಯಲ್ಲಿಟ್ಟು ಪೂಜೆ ಮಾಡಿದ್ದಾಗಿ ನಟ ಜಯರಾಂ ಈ ಹಿಂದೆ ಎಸ್ಐಟಿಗೆ ತಿಳಿಸಿದ್ದರು.






Be the first to comment
Leave a Reply