
ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ, ಅಭಿಮಾನಿಗಳ ಪ್ರೀತಿಯ ‘ಗಬ್ಬರ್’ ಶಿಖರ್ ಧವನ್ (Shikhar Dhawan) ತಮ್ಮ ಜೀವನದ ‘ಎರಡನೇ ಇನ್ನಿಂಗ್ಸ್’ ಆರಂಭಿಸಿದ್ದಾರೆ. ಕ್ರಿಕೆಟ್ ಅಂಗಳದಿಂದ ದೂರ ಸರಿದಿದ್ದ ಧವನ್, ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ದಾಂಪತ್ಯ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ದೀರ್ಘಕಾಲದ ಗೆಳತಿ ಸೋಫಿ ಶೈನ್ (Sophie Shine) ಅವರೊಂದಿಗೆ ಶಿಖರ್ ಧವನ್ ಸಪ್ತಪದಿ ತುಳಿದಿದ್ದಾರೆ.

ಶಿಖರ್ ಧವನ್ ಮತ್ತು ಸೋಫಿ ಶೈನ್ ಅವರ ವಿವಾಹ ಸಮಾರಂಭ ದೆಹಲಿಯಲ್ಲಿ ಅತ್ಯಂತ ಸರಳವಾಗಿ ಮತ್ತು ಖಾಸಗಿಯಾಗಿ ನಡೆದಿದೆ. ಕೇವಲ ಆಪ್ತರು ಮತ್ತು ಕುಟುಂಬಸ್ಥರು ಮಾತ್ರ ಈ ಮದುವೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಧವನ್ ಮದುವೆಯ ಗುಟ್ಟನ್ನು ರಟ್ಟು ಮಾಡಿದ್ದು ಟೀಂ ಇಂಡಿಯಾದ ಸ್ಪಿನ್ನರ್ ಯುಜುವೇಂದ್ರ ಚಾಹಲ್ (Yuzvendra Chahal). ಮದುವೆಯ ಸುಂದರವಾದ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಚಾಹಲ್, ನವಜೋಡಿಗೆ ಶುಭಕೋರುವ ಮೂಲಕ ಈ ಸಿಹಿ ಸುದ್ದಿಯನ್ನು ಜಗತ್ತಿಗೆ ತಿಳಿಸಿದ್ದಾರೆ.

ಈ ಜೋಡಿ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಇದೀಗ ಎರಡು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಮೈದಾನದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಮನ ಗೆದ್ದಿದ್ದ ಧವನ್, ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದರು. ಇದೀಗ ಅವರು ಮತ್ತೆ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿರುವುದಕ್ಕೆ ಅವರ ಕೋಟ್ಯಂತರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.






Be the first to comment
Leave a Reply