ಸ್ವಯಂ ಘೋಷಿತ ದೇವ ಮಾನವ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್‌; ಪೋಕ್ಸೊ ಕೇಸ್ ದಾಖಲು

ಯಾದಗಿರಿ ಜಿಲ್ಲೆ, ಶಹಾಪುರ ತಾಲೂಕಿನ ಮಹಲರೋಜಾ ಗ್ರಾಮದ ಸ್ವಯಂ ಘೋಷಿತ ದೇವ ಮಾನವ ಮಲ್ಲಿಕಾರ್ಜುನ ಮುತ್ಯಾಗೆ ಪೊಲೀಸರು ಬಿಗ್‌ ಶಾಕ್‌ ನೀಡಿದ್ದಾರೆ. ಇದೀಗ ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ಸಿಡಿಪಿಒ ಅವರ ದೂರಿನ ಮೇರೆಗೆ ಮುತ್ಯಾನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.

ಯಾದಗಿರಿ, ಫೆ. 26: ಯಾದಗಿರಿ ಜಿಲ್ಲೆ, ಶಹಾಪುರ ತಾಲೂಕಿನ ಮಹಲರೋಜಾ ಗ್ರಾಮದ ಸ್ವಯಂ ಘೋಷಿತ ದೇವ ಮಾನವ ಮಲ್ಲಿಕಾರ್ಜುನ ಮುತ್ಯಾಗೆ ಪೊಲೀಸರು ಬಿಗ್‌ ಶಾಕ್‌ ನೀಡಿದ್ದಾರೆ . ಆತನ ವಿರುದ್ಧಇದೀಗ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿದೆ. ಬುಧವಾರ (ಫೆಬ್ರವರಿ 25) ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್‌ ಕೋಸುಂಬೆ ದಾಖಲಿಸಿಕೊಂಡ ದೂರಿನ ಅನ್ವಯ ಪೊಲೀಸ್ ವರಿಷ್ಠಾಧಿಕಾರಿಗೆ ಬರೆದ ಪತ್ರ ಸುದ್ದಿಯಾಗಿತ್ತು. ಇದೀಗ ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ಸಿಡಿಪಿಒ ಅವರ ದೂರಿನ ಮೇರೆಗೆ ಮುತ್ಯಾನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.

ಇನ್ನು ಮಲ್ಲಿಕಾರ್ಜುನ ಮುತ್ಯಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ʼʼಅಪ್ಪಾಜಿ ಮಗಳು ಎಂಬ ಭಾವನೆಯಲ್ಲಿ ಆ ಬಾಲಕಿಯೊಡನೆ ಪ್ರೀತಿಯಿಂದ ನಡೆದುಕೊಂಡಿದ್ದೇನೆ. ಅದರ ವಿನಾಃ ಯಾವುದೇ ಕೆಟ್ಟ ಉದ್ದೇಶ ಖಂಡಿತವಾಗಿ ಇಲ್ಲ. ಕಾನೂನು ಹೋರಾಟದಲ್ಲಿ ನನಗೆ ಖಂಡಿತ ಜಯ ದೊರೆಯಲಿದೆ. ಇದು ನನ್ನದೇ ಗೆಲುವು, ನಾನೇ ಗೆಲ್ಲುವೆ, ಭಕ್ತರು ಯಾರೂ ಆತಂಕಕ್ಕೆ ಒಳಗಾಗಬೇಡಿ. ನಾನು ಎಲ್ಲೂ ಹೋಗಿಲ್ಲ. ಇಲ್ಲೇ ಇದ್ದೇನೆʼʼ ಎಂದು ಮಲ್ಲಿಕಾರ್ಜುನ ಮುತ್ಯಾ ಹೇಳಿದ್ದಾನೆ.

ಸ್ಥಳ ಮಹಜರು

ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಶಹಾಪುರ ತಾಲೂಕಿನ ಗೋಗಿ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಮಹಲ್ ರೋಜಾದಲ್ಲಿರುವ ಆತನ ಮಠದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದರು. ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಸಮ್ಮುಖದಲ್ಲಿ ಮುತ್ಯಾ ಎಲ್ಲ ಕೋಣೆಗಳನ್ನು ಪರಿಶೀಲಿಸಲಾಗಿದೆ. ಪ್ರಕರಣದ ತನಿಖೆಗೆ ಶಹಾಪುರ ಸಿಪಿಐ ಶರಣಗೌಡ ನ್ಯಾಮಣ್ಣ ಅವರನ್ನು ನೇಮಕ ಮಾಡಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಮಲ್ಲಿಕಾರ್ಜುನ ಮುತ್ಯಾಗೆ ನೊಟೀಸ್‌ ನೀಡುವ ಸಾಧ್ಯತೆ ಇದೆ.

ಮುತ್ಯಾ ಪರ ಪೋಸ್ಟರ್ ಅಭಿಯಾನ

ಈ ಮಧ್ಯೆ ಸೋಶಿಯಲ್‌ ಮೀಡಿಯಾದಲ್ಲಿ ಮುತ್ಯಾ ಪರ ಪೋಸ್ಟರ್ ಅಭಿಯಾನ ಆರಂಭವಾಗಿದೆ. ಪೋಕ್ಸೊ ಪ್ರಕರಣ ದಾಖಲಾಗಿರುವ ಬೆನ್ನಲ್ಲೇ ಮುತ್ಯಾನ ಬೆಂಬಲಿಗರು ಹಾಗೂ ಭಕ್ತರು ‘We Stand With Mallikarjun Mutya’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಅಭಿಯಾನ ನಡೆಸುತ್ತಿದ್ದಾರೆ.

ಮಠದತ್ತ ಭಕ್ತರ ದಂಡು

ಇತ್ತ ವಿವಾದ ಭುಗಿಲೆಳುತ್ತಿದ್ದಂತೆ ಭಕ್ತರ ದಂಡು ಮಠದತ್ತ ಧಾವಿಸಿದೆ. ʼʼಮುತ್ಯಾನ ಆಶೀರ್ವಾದದಿಂದ ನಮಗೆ ಒಳ್ಳೆಯದಾಗಿದೆ. ಅವರು ಆ ರೀತಿ ಕೆಲಸ ಮಾಡುವ ವ್ಯಕ್ತಿ ಅಲ್ಲ. ಮುತ್ಯಾ ಮತ್ತು ಮಠಕ್ಕೆ ಕಳಂಕ ತರುವ ಕೆಲಸ ನಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವನ್ನು ತಪ್ಪಾಗಿ ಬಿಂಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ತಾವು ಪೊಲೀಸ್​​ ದೂರು ನೀಡಲಿದ್ದೇವೆʼʼ ಎಂದು ಭಕ್ತರು ತಿಳಿಸಿದ್ದಾರೆ.

ಯಾರು ಈ ಮಲ್ಲಿಕಾರ್ಜುನ ಮುತ್ಯಾ?

ಕಳೆದ ನಾಲ್ಕು ವರ್ಷಗಳಿಂದ ಸಾಮಾಜಿಕ ಜಾಲತಾಣದ ಮೂಲಕ ಮುನ್ನೆಲೆಗೆ ಬಂದ 26ರಿಂದ 27 ವರ್ಷದ ಮಲ್ಲಿಕಾರ್ಜುನ ಸ್ವಯಂ ಘೋಷಿತ ದೇವಮಾನವನಾಗಿ ಸದ್ದು ಮಾಡಿದ್ದಾನೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲರೋಜಾ ಗ್ರಾಮದವನಾದ ಮಲ್ಲಿಕಾರ್ಜುನ ಮುತ್ಯಾ ಹೇಳಿದ್ದೇ ಇವರ ಭಕ್ತರಿಗೆ ವೇದವಾಕ್ಯ.

Be the first to comment

Leave a Reply

Your email address will not be published. Required fields are marked *

ad image