ಕರ್ನಾಟಕವನ್ನು ಸಾಲ ರಾಜ್ಯವನ್ನಾಗಿಸಿದ ಶತಮಾನದ ನಕಲಿ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ : ಆರ್‌.ಅಶೋಕ್‌

ಬೆಂಗಳೂರು, ಮಾ.4- ಸಾಲವೇ ಎಲ್ಲದಕ್ಕೂ ವಾಮಮಾರ್ಗ ಎಂದುಕೊಂಡಿರುವ ಈ ಶತಮಾನದ ನಕಲಿ ಅರ್ಥ ಶಾಸ್ತ್ರಜ್ಞ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕವನ್ನು ಸಾಲ ರಾಜ್ಯವನ್ನಾಗಿ ಪರಿವರ್ತಿಸಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಸಾಲ- ಶೂಲದ ಹರಿಕಾರ ಸಾಲರಾಮಯ್ಯ ಅವರೇ, 2025-26ರ ಅಂತ್ಯದ ವೇಳೆಗೆ ರಾಜ್ಯದ ಒಟ್ಟು ಸಾಲದ ಮೊತ್ತ 8.14 ಲಕ್ಷ ಕೋಟಿಯಷ್ಟಾಗಲಿದೆ ಮತ್ತು ಇದು ರಾಜ್ಯದ ಜಿಎಸ್‌‍ಡಿಪಿಯ ಶೇ26.5ರಷ್ಟಾಗಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಂದಾಜಿಸಿದ್ದು, ಇದರಿಂದ 7 ಕೋಟಿ ಕರ್ನಾಟಕದ ತಲಾ ಸಾಲ 1,16,258 ರೂಪಾಯಿಗಳಿಗೆ ಏರಲಿದೆ ಎಂದು ಹೇಳಿದ್ದಾರೆ.

ತಮ ಕುರ್ಚಿ ಉಳಿಸಿಕೊಳ್ಳಲು ಸಾಲರಾಮಯ್ಯನವರು ಜಾರಿಗೆ ತಂದಿರುವ ಅವೈಜ್ಞಾನಿಕ ಗ್ಯಾರೆಂಟಿಗಳು, ಮಾಡಿರುವ ಸಾಲು ಸಾಲು ಹಗರಣಗಳು ಕನ್ನಡಿಗರ ಮೇಲೆ ಲಕ್ಷಾಂತರ ಕೋಟಿ ಸಾಲದ ಹೊರೆ ಹೊರಿಸಿ ಕರ್ನಾಟಕದ ಆರ್ಥಿಕ ಶಿಸ್ತನ್ನು ಹಳಿ ತಪ್ಪಿಸಿದೆ. ಸಾಲದ ಸುಳಿಗೆ ಕರುನಾಡು ಸಿಲುಕಿದೆ. ಕರ್ನಾಟಕ ಅಭಿವೃದ್ಧಿಯಲ್ಲಿ 20 ವರ್ಷ ಹಿಂದಕ್ಕೆ ಬಿದ್ದಿದೆ. ಆರ್ಥಿಕತೆ ಹಳ್ಳ ಹಿಡಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ, ತಮ ಕೃಪೆಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಈಗಾಗಲೇ ಪಾತಾಳಕ್ಕೆ ಕುಸಿದಿರುವಾಗ, ಯಾವ ಮುಖ ಇಟ್ಟುಕೊಂಡು ಈಗ ಇನ್ನೊಂದು ಬಜೆಟ್‌ ಮಂಡಿಸುತ್ತೀರಿ ಸ್ವಾಮಿ? ಕನ್ನಡಿಗರ ಕ್ಷಮೆ ಕೇಳಿ, ರಾಜೀನಾಮೆ ಕೊಟ್ಟು ಹೊರಡಿ. ಕರ್ನಾಟಕವನ್ನು ಉಳಿಸಿ ಎಂದು ಅಶೋಕ್‌ ಒತ್ತಾಯಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image