
ಬೆಂಗಳೂರು: ಮುಡಾ ಆಕ್ರಮ ಸೈಟ್ ಹಂಚಿಕೆ ಕೇಸ್ ದೂರುದಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣರನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಿರಿಯ ಕೆಎಎಸ್ ಅಧಿಕಾರಿ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಬಳಿಯೇ ಅರೆಸ್ಟ್ ಮಾಡಿದ್ದಾರೆ. ಮುಡಾ ಮಾಜಿ ಆಯುಕ್ತ ನಟೇಶ್ ದೂರಿನ ಅನ್ವಯ ಸ್ನೇಹಮಯಿ ಕೃಷ್ಣ ವಿರುದ್ಧ FIR ದಾಖಲಾಗಿದೆ. ಸಿಸಿಬಿ ಪೊಲೀಸರು ಮೂರು ಸೆಕ್ಷನ್ ಗಳಲ್ಲಿ ಕೇಸು ದಾಖಲಿಸಿದ್ದು, BNS 336, 335 ಹಾಗೂ 340 ಸೆಕ್ಷನ್ ಅಡಿಯಲ್ಲಿ FIR ದಾಖಲಾಗಿದೆ. ನಕಲಿ ದಾಖಲೆ ಸೃಷ್ಟಿ, ಮಾನಹಾನಿ, ಫೋರ್ಜರಿ ಸೆಕ್ಷನ್ ಗಳಲ್ಲಿ ಕೇಸ್ ದಾಖಲಾದ ಹಿನ್ನೆಲೆ ಕೃಷ್ಣಮಯಿಗೆ ಸಂಕಷ್ಟ ಶುರುವಾಗಿದೆ.
ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸ್ನೇಹಮಯಿ ಕೃಷ್ಣ ವಿಚಾರಣೆ ನಡೆಸಲಾಗಿದೆ. ಸಿಸಿಬಿ ಡಿಸಿಪಿ ಖಾಸಿಂ ನೇತೃತ್ವದಲ್ಲಿ ತಡರಾತ್ರಿವರೆಗೂ ವಿಚಾರಣೆ ನಡೆಸಿದ್ರು. ಮುಡಾ ಮಾಜಿ ಆಯುಕ್ತ ಡಿಬಿ ನಟೇಶ್, ತಮ್ಮ ವಿರುದ್ಧ ಸ್ನೇಹಮಯಿ ಕೃಷ್ಣ ನಕಲಿ ಆಡಿಯೋ ಸೃಷ್ಟಿಸಿ ಬಿಡುಗಡೆ ಮಾಡಿದ್ದಾರೆ ಎಂದು ಸಿಸಿಬಿಗೆ ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಸ್ನೇಹಮಯಿ ಕೃಷ್ಣ ಅವರು ಕೋರ್ಟ್‌ಗೆ ಪ್ರಮುಖ ಆಡಿಯೋ ಮತ್ತು ದಾಖಲೆಗಳನ್ನು ಸಲ್ಲಿಸಲು ಸಿದ್ಧವಾಗಿದ್ದ ಸಮಯದಲ್ಲಿಯೇ ಬಂಧನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇನ್ನೂ ಏನಿದು ಪ್ರಕರಣ ಅಂತ ನೋಡೋದಾದ್ರೆ, ಸ್ನೇಹಮಯಿ ಕೃಷ್ಣ ಮೂರು ಪ್ರಮುಖ ಆರೋಪಗಳನ್ನು ಮಾಡಿದ್ದರು. ಮೊದಲನೆಯದಾಗಿ, ಮುಡಾ ಮಾಜಿ ಆಯುಕ್ತ ನಟೇಶ್ ಬಡ್ತಿ ಪಡೆಯಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ 1.60 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ಹಣವನ್ನು ಸಾಗಿಸಲಾಯಿತು ಎನ್ನಲಾದ ಕಾರಿನ ಭಾವಚಿತ್ರವನ್ನೂ ಅವರು ಬಿಡುಗಡೆ ಮಾಡಿದ್ದರು. ಎರಡನೆಯದಾಗಿ, ಡಿ.ಬಿ. ನಟೇಶ್ ಅವರು ವ್ಯಕ್ತಿಯೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಸ್ನೇಹಮಯಿ ಕೃಷ್ಣ ಬಿಡುಗಡೆ ಮಾಡಿದ್ದರು. ಕೇವಲ ಆರು ಸೆಕೆಂಡ್‌ಗಳ ‘ಟ್ರೈಲರ್’ ಬಿಡುಗಡೆ ಮಾಡಿದ್ದೇನೆ ಎಂದಿದ್ದ ಅವರು, ಪೂರ್ಣ ಆಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ತಿಳಿಸಿದ್ದರು. ಈ ಆಡಿಯೋದಲ್ಲಿ ನಟೇಶ್ ಅವರು ಹೇಗಾದರೂ ಮಾಡಿ ಸ್ನೇಹಮಯಿ ಕೃಷ್ಣ ಅವರನ್ನು ಸಂಪರ್ಕಕ್ಕೆ ತೆಗೆದುಕೊಳ್ಳುವಂತೆ ವ್ಯಕ್ತಿಯೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ಮೂರನೆಯದಾಗಿ, ಲೋಕಾಯುಕ್ತದಲ್ಲಿ ಮುಡಾ ಪ್ರಕರಣದ ತನಿಖೆ ನಡೆಯುತ್ತಿದ್ದರೂ, ಹಿಂದಿನ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರೂ, ನಟೇಶ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಟೇಶ್ ಲೋಕಾಯುಕ್ತರಿಗೂ ಲಂಚ ನೀಡಿದ್ದಾರೆ ಎಂದು ಆರೋಪಿಸಿ, ಕೈಬರಹದ ದಾಖಲೆಯೊಂದನ್ನು ಸ್ನೇಹಮಯಿ ಕೃಷ್ಣ ಬಿಡುಗಡೆ ಮಾಡಿದ್ದರು.
ಸ್ನೇಹಮಯಿ ಕೃಷ್ಣ ಅವರನ್ನ ವಶಕ್ಕೆ ಪಡೆದ ನಂತರ, ಮೈಸೂರಿನಲ್ಲಿರುವ ಅವರ ಎರಡು ಮನೆಗಳಲ್ಲಿ ಸಿಸಿಬಿ ಪೊಲೀಸರು ಶೋಧ ನಡೆಸಿದ್ದಾರೆ. ಮಧ್ಯಾಹ್ನದಿಂದ ರಾತ್ರಿಯವರೆಗೆ ನಡೆದ ಈ ಶೋಧ ಕಾರ್ಯದಲ್ಲಿ ಒಂದು ಪೆನ್ ಡ್ರೈವ್, ಐಫೋನ್, ಸ್ವಿಚ್ ಆಫ್ ಆಗಿದ್ದ ಒಂದು ಫೋನ್, ಹಾರ್ಡ್ ಡಿಸ್ಕ್ ಮತ್ತು ಮೆಮೊರಿ ಕಾರ್ಡ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.






Be the first to comment
Leave a Reply