ಸೋಷಿಯಲ್‌ ಮೀಡಿಯಾ ಸ್ಟಂಟ್‌ಗಾಗಿ ವಿಷಕಾರಿ ಏಡಿ ತಿಂದು ಫುಡ್‌ ವ್ಲಾಗರ್‌ ಸಾವು

ನ್ಯೂಯಾರ್ಕ್: ಸೋಷಿಯಲ್‌ ಮೀಡಿಯಾ ಸ್ಟಂಟ್‌ಗಾಗಿ ವಿಷಕಾರಿ ‘ಡೆವಿಲ್‌ ಕಾರ್ಬ್‌’ (ಒಂದು ಪ್ರಭೇದದ ಏಡಿ) ತಿಂದು ಫುಡ್‌ ಇನ್ಫ್ಲುಯೆನ್ಸರ್‌ ದುರಂತ ಸಾವಿಗೀಡಾಗಿರುವ ಘಟನೆ ನಡೆದಿದೆ.

 

ಎಮ್ಮಾ ಅಮಿತ್‌ ಮೃತ ಮಹಿಳೆ. ಈಕೆ ತನ್ನ ಸ್ನೇಹಿತರೊಟ್ಟಿಗೆ ಪಲವಾನ್‌ನ ಪೋರ್ಟೊ ಪ್ರಿನ್ಸೆಸಾ ಬಳಿಯ ಮ್ಯಾಂಗ್ರೋವ್‌ ಕಾಡಿನಲ್ಲಿ ಚಿಪ್ಪು ಮೀನುಗಳನ್ನು ಹಿಡಿದಿದ್ದರು. ಎಮ್ಮಾ ಅವರು ಮೀನುಗಳನ್ನು ಬೇಯಿಸಿ ತಿನ್ನುವ ವೀಡಿಯೋವನ್ನು ಟಿಕ್‌ಟಾಕ್‌ ಮತ್ತು ಫೇಸ್‌ಬುಕ್‌ಗಾಗಿ ಚಿತ್ರೀಕರಿಸಿದ್ದರು.

ಮರುದಿನ ಏಡಿಯ ವಿಷದಿಂದ ಆಕೆ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಆಕೆ ಪ್ರಜ್ಞೆ ಕಳೆದುಕೊಂಡಾಗ ಅವಳ ತುಟಿಗಳು ಕಡು ನೀಲಿ ಬಣ್ಣಕ್ಕೆ ತಿರುಗಿದವು. ಆರೋಗ್ಯ ಸ್ಥಿತಿ ಹದಗೆಟ್ಟು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಮಹಿಳೆ ಮೃತಪಟ್ಟಿದ್ದಾರೆ.

ಈ ದುರಂತ ಘಟನೆಯ ನಂತರ ಲುಜ್ವಿಮಿಂಡಾ ಗ್ರಾಮದ ಮುಖ್ಯಸ್ಥೆ ಲ್ಯಾಡಿ ಗೆಮಾಂಗ್, ಪೋರ್ಟೊ ಪ್ರಿನ್ಸೆಸಾ ನಿವಾಸಿಗಳಿಗೆ ಈ ಏಡಿಗಳ ಬಗ್ಗೆ ತುರ್ತು ಎಚ್ಚರಿಕೆ ನೀಡಿದ್ದಾರೆ. ಈ ಡೆವಿಲ್‌ ಕಾರ್ಬ್‌ಗಳನ್ನು ತಿನ್ನಬೇಡಿ. ಈ ಏಡಿಗಳನ್ನು ಸೇವಿಸಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಗೆಮಾಂಗ್‌ ಸಲಹೆ ನೀಡಿದ್ದಾರೆ

ಡೆವಿಲ್ ಕಾರ್ಬ್‌ಗಳು ವಿಷಕಾರಿ ರೀಫ್ ಏಡಿಗಳಾಗಿವೆ. ಇವು ಇಂಡೋ-ಪೆಸಿಫಿಕ್ ಪ್ರದೇಶದಾದ್ಯಂತ ಹವಳದ ದಿಬ್ಬಗಳ ಮೇಲೆ ವಾಸಿಸುತ್ತವೆ. ಅವುಗಳು ಪಫರ್‌ಫಿಶ್‌ನಲ್ಲಿಯೂ ಕಂಡುಬರುವ ಸ್ಯಾಕ್ಸಿಟಾಕ್ಸಿನ್ ಮತ್ತು ಟೆಟ್ರೋಡೋಟಾಕ್ಸಿನ್‌ನಂತಹ ಮಾರಕ ನ್ಯೂರೋಟಾಕ್ಸಿನ್‌ಗಳನ್ನು ಹೊಂದಿರುತ್ತವೆ. ತಜ್ಞರು ಅವುಗಳನ್ನು ತಿನ್ನದಂತೆ ಎಚ್ಚರಿಸುತ್ತಾರೆ.

Be the first to comment

Leave a Reply

Your email address will not be published. Required fields are marked *

ad image