
ಹೈದರಾಬಾದ್: 21 ವರ್ಷದ ಯೂಟ್ಯೂಬರ್ ಹಾಗೂ ವಿಜ್ಞಾನ (BSc) ವಿದ್ಯಾರ್ಥಿನಿಯೊಬ್ಬಳು ತನ್ನ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಜೀವಬಿಟ್ಟ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಮೃತ ಯುವತಿಯನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ಬೋನು ಕೋಮಲಿ ಎಂದು ಗುರುತಿಸಲಾಗಿದೆ. ಕೆಟ್ಟ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನ ತನ್ನ ತಾಯಿಗೆ ‘ಐ ಲವ್ ಯು ಸೋ ಮಚ್’ ಎಂದು ಮೆಸೇಜ್ ಮಾಡಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿದೆ. ಆಂಧ್ರ ಮೂಲದ ಕೋಮಲಿ ಕಳೆದ 11 ತಿಂಗಳಿಂದ ಹೈದರಾಬಾದ್ನ ಅಪಾರ್ಟ್ಮೆಂಟ್ ಒಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಳು. ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಈಕೆ, ಪಾರ್ಟ್-ಟೈಮ್ ಆಗಿ ಯೂಟ್ಯೂಬ್ನಲ್ಲಿ ಲೈಫ್ಸ್ಟೈಲ್ ಮತ್ತು ವೈಯಕ್ತಿಕ ವೀಡಿಯೊಗಳನ್ನು ರಚಿಸಿ ಅಪ್ಲೋಡ್ ಮಾಡುತ್ತಿದ್ದಳು.
ತಾಯಿಗೆ ಕಡೆಯ ಮೆಸೇಜ್, ಫೋನ್ ಸ್ವಿಚ್ ಆಫ್!
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ.. ಕೋಮಲಿ ಸೋಮವಾರ ಮುಂಜಾನೆ ಕುವೈತ್ನಲ್ಲಿ ಕೆಲಸ ಮಾಡುತ್ತಿರುವ ತನ್ನ ತಾಯಿ ಬಿ. ಸತ್ಯ ವರಲಕ್ಷ್ಮಿಗೆ ವಾಟ್ಸಾಪ್ ಮೆಸೇಜ್ ಮಾಡಿದ್ದಾಳೆ. ಐ ಲವ್ ಯು ಮಮ್ಮಿ ಸೋ ಮಚ್.. ತಮ್ಮನನ್ನು ಚೆನ್ನಾಗಿ ನೋಡಿಕೋ ಎಂದು ಸಂದೇಶ ಕಳುಹಿಸಿದ್ದಳು. ತದನಂತರ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ತಾಯಿ ಸತತವಾಗಿ ಕರೆ ಮಾಡಿದರೂ ಆಕೆ ಸ್ವೀಕರಿಸಿಲ್ಲ. ಗಾಬರಿಗೊಂಡ ತಾಯಿ, ತಕ್ಷಣವೇ ಕೋಮಲಿಯ ಸ್ನೇಹಿತರೊಬ್ಬರಿಗೆ ಕರೆ ಮಾಡಿ ಫ್ಲಾಟ್ ಬಳಿ ಹೋಗಿ ನೋಡುವಂತೆ ತಿಳಿಸಿದ್ದಾರೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಸ್ನೇಹಿತ ಫ್ಲಾಟ್ಗೆ ಹೋಗಿ ಎಷ್ಟೇ ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ಬಂದಿಲ್ಲ. ಕೊನೆಗೆ ಬಾಗಿಲಿನ ಚಿಲಕ ಒಡೆದು ಒಳನುಗ್ಗಿ ನೋಡಿದಾಗ, ಆಕೆ ಸೀರೆಯಿಂದ ಫ್ಯಾನ್ಗೆ ನೇಣು ಬಿಗಿದುಕೊಂಡಿರೋದು ಕಂಡುಬಂದಿದೆ. ಮೃತದೇಹದ ಬಳಿ ಒಂದು ಏಣಿ ಮತ್ತು ಸೀರೆ ಪತ್ತೆಯಾಗಿದೆ.
ಕೋಮಲಿ ಕಳೆದ ಮೂರು ವರ್ಷಗಳಿಂದ 27 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಹಾಗೂ ಸಹ-ಯೂಟ್ಯೂಬರ್ ಆಗಿರುವ ಯುವಕನೊಂದಿಗೆ ಪ್ರೀತಿಯಲ್ಲಿದ್ದಳು. ಇತ್ತೀಚೆಗೆ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಇಬ್ಬರೂ ಬೇರೆಯಾಗಿದ್ದರು. ಈ ವಿಚಾರವಾಗಿ ಆಕೆ ತೀವ್ರ ಖಿನ್ನತೆಗೆ ಒಳಗಾಗಿದ್ದಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದೇ ಕಾರಣಕ್ಕೆ ಆಕೆ ಸುಮಾರು ಆರು ತಿಂಗಳ ಹಿಂದೆಯೂ ಆತ್ಮ*ತ್ಯೆಗೆ ಯತ್ನಿಸಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೋಮಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಾವಿನ ನಿಖರ ಕಾರಣ ತಿಳಿಯಲು ಆಕೆಯ ಫೋನ್ ಕಾಲ್ ರೆಕಾರ್ಡ್ಗಳು, ಸಂದೇಶಗಳು ಹಾಗೂ ಸ್ನೇಹಿತರು, ನೆರೆಹೊರೆಯವರ ಹೇಳಿಕೆಗಳನ್ನು ಸಂಗ್ರಹಿಸುತ್ತಿದ್ದು, ಡಿಜಿಟಲ್ ಮತ್ತು ಭೌತಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ.






Be the first to comment
Leave a Reply